ಹೊಸದಿಲ್ಲಿ: ಮಹಾತ್ಮಾ ಗಾಂಧಿ ಕುರಿತಂತೆ ಅವಹೇಳನಕಾರಿ ದ್ವೇಷ ಭಾಷಣ ಮಾಡಿ ಬಂಧನಕ್ಕೊಳಗಾಗಿದ್ದ ಕಾಳಿಚರಣ್ ಮಹಾರಾಜ್ ಗೆ ಪುಣೆ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನೀಡಿರುವುದಾಗಿ ಬಾರ್ ಬೆಂಚ್ ವರದಿ ಮಾಡಿದೆ.
ರಾಯಪುರದಲ್ಲಿ ನಡೆದ ಧರ್ಮ ಸಂಸದ್ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದ ಕಾಳಿ ಚರಣ್ ಮಹಾರಾಜ್ ಮಹಾತ್ಮ ಗಾಂಧೀಜಿ ಅವರನ್ನು ಟೀಕೆ ಮಾಡಿದ್ದಲ್ಲದೆ, ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸಿ ವಿವಾದ ಸೃಷ್ಟಿಸಿದ್ದರು.
ಮಹಾತ್ಮ ಗಾಂಧಿ ಅವಹೇಳನಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಸಾಕ್ಷಿ ಮಹಾರಾಜ್‌ರನ್ನು ಬಿಡುಗಡೆಗೊಳಿಸುವಂತೆ ಹಲವು ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರಕರಣದಲ್ಲಿ ಏಕಮುಖವಾಗಿ ತನಿಖೆ ನಡೆಸಲಾಗಿದೆ, ಹಿಂದೂ ಸಮುದಾಯವನ್ನು ಪ್ರಚೋದಿಸಲು ಕಾಳಿಚರಣ್ ಮಹಾರಾಜ್‌ರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ತಕ್ಷಣವೇ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕೆಂದು ಹಿಂದುತ್ವವಾದಿಗಳು ಆಗ್ರಹಿಸಿದ್ದರು.