ಶ್ರೀರಾಮನ ಹೆಸರಲ್ಲಿ ರಾವಣ ರಾಜ್ಯ ಸೃಷ್ಟಿಸಿದಿರಿ: ಸಂಘಪರಿವಾರದ ವಿರುದ್ಧ ಹೆಚ್ಡಿಕೆ ಕಿಡಿ

Prasthutha|

➤ʼಮೈಸೂರಿನಲ್ಲಿ ಸರ್ವ ಜನಾಂಗದ ಶಾಂತಿಯ ತೋಟʼ ಸಂವಾದ

- Advertisement -

ಮೈಸೂರು: ಸೂಕ್ಷ್ಮ ವಿಷಯಗಳ ಮೂಲಕ ಅಶಾಂತಿ ಸೃಷ್ಟಿ ಮಾಡುತ್ತಿರುವ ಸಂಘಟನೆಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, “ಶ್ರೀರಾಮನ ಹೆಸರೇಳಿಕೊಂಡು ರಾವಣ ರಾಜ್ಯ ಸೃಷ್ಟಿ ಮಾಡಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ನಗರದ ಕಲಾಮಂದಿರದಲ್ಲಿ ಇಂದು ʼಜೆಪಿ ವಿಚಾರ ವೇದಿಕೆʼ ಹಮ್ಮಿಕೊಂಡಿದ್ದ ʼಸರ್ವ ಜನಾಂಗದ ತೋಟ; ಭಾವೈಕ್ಯತೆಯ ಒಂದು ಚರ್ಚೆʼ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

- Advertisement -

ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿ ಮಾಡಲು ಹೊರಟಿವೆ. ಅದೆಂದಿಗೂ ಸಾಧ್ಯವಾಗುವುದಿಲ್ಲ. ಅಲ್ಲಿ ನಡೆದ ಅವರ ಆಟ ಇಲ್ಲಿ ನಡೆಯುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಎಲ್ಲೆಲ್ಲೂ ಬಿಜೆಪಿಯ ದ್ವಂದ್ವ ನಿಲುವು ಎದ್ದು ಕಾಣುತ್ತಿದೆ. ಸರಕಾರ ರಾಜ್ಯದ ಪ್ರತಿ ಕುಟುಂಬವು ನೆಮ್ಮದಿಯಾಗಿ ಬದುಕುವಂಥ ವಾತಾವರಣ ನಿರ್ಮಾಣ ಮಾಡಬೇಕು. ಅಭಿವೃದ್ಧಿಶೀಲ ಕರ್ನಾಟಕವನ್ನು ಎಲ್ಲಾ ರೀತಿಯಲ್ಲೂ ಹಾಳು ಮಾಡಿ ಉತ್ತರ ಪ್ರದೇಶವನ್ನಾಗಿ ಮಾಡಲು ಹೊರಟಿದೆ. ಅದಕ್ಕೆ ಅವಕಾಶ ಕೊಡಬಾರದು. ಈ ವೇದಿಕೆಯ ಮೂಲಕ ಇಡೀ ರಾಜ್ಯಕ್ಕೆ ಈ ಸಂದೇಶವನ್ನು ಕೊಡಬೇಕಾಗಿದೆ ಎಂದು ಅವರು ಹೇಳಿದರು.

ಅಶಾಂತಿ ಸೃಷ್ಟಿ ಮಾಡುತ್ತಿರುವ ಸಂಘಟನೆಗಳನ್ನು ಉಗ್ರವಾಗಿ ತರಾಟೆಗೆ ತೆಗೆದುಕೊಂಡ ಅವರು; ಮನೆಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಪವಿತ್ರ ಕೇಸರಿ ಬಟ್ಟೆ ತೊಟ್ಟು ಅಪಮಾನ ಮಾಡಬೇಡಿ. ಕೇಸರಿ ಪವಿತ್ರ ವಸ್ತ್ರ. ಅದಕ್ಕೊಂದು ಪಾವಿತ್ರ್ಯತೆ ಇದೆ. ಅದನ್ನು ಹೆಗಲ ಮೇಲೆ ಹಾಕಿಕೊಂಡು ಮಾಡಬಾರದ್ದನ್ನು ಮಾಡಿ ಶ್ರೀರಾಮ ಮತ್ತು ಹಿಂದೂ ಧರ್ಮಕ್ಕೆ ಕಳಂಕ ತರಬೇಡಿ. ಕರ್ನಾಟಕವನ್ನು ರಾವಣ ರಾಜ್ಯ ಮಾಡಬೇಡಿ, ಕೈಲಾದರೆ ರಾಮರಾಜ್ಯ ನಿರ್ಮಾಣ ಮಾಡಿ ಎಂದು ಸವಾಲು ಹಾಕಿದರು.

ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಮೈಸೂರಿನ ಸಿಎಸ್‌ʼಐ ಅಧ್ಯಕ್ಷರಾದ ರೆವರಂಡ್‌ ಗುರುಶಾಂತ್,‌ ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌ʼನ ಅಧ್ಯಕ್ಷ ಮೌಲಾನ ಜಖಾವುಲ್ಲಾ ಸಿದ್ದಿಕಿ, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್‌ ಅವರುಗಳು ಮಾತನಾಡಿದರು.

Join Whatsapp