ರೈತ-ಕೂಲಿಕಾರ-ಕಾರ್ಮಿಕರ ಸಮಸ್ಯೆ ಇತ್ಯರ್ಥ್ಯಕ್ಕಾಗಿ ಜು.25 ರಿಂದ ಜಂಟಿ ಆಂದೋಲನ

Prasthutha: July 15, 2021

ಬೆಂಗಳೂರು: ಜನಪರ ಅಂಶಗಳ ಬೇಡಿಕೆ ಪಟ್ಟಿಯೊಂದಿಗೆ ಮೂರು ವರ್ಗಗಳಿಗೆ ಸಂಬಂಧಿಸಿದಂತೆ ಪ್ರಮುಖ ಬೇಡಿಕೆಗಳನ್ನು ಮಂಡಿಸಿ ರೈತ-ಕೂಲಿಕಾರ-ಕಾರ್ಮಿಕರ ಜಂಟಿ ಹೋರಾಟವನ್ನು ಜುಲೈ 25 ರಿಂದ ಆಗಸ್ಟ್ 8ರವರೆಗೆ ನಡೆಸಲು ಎಐಕೆಎಸ್, ಎಐಎಡಬ್ಲ್ಯೂಯು, ಸಿಐಟಿಯು ಕರೆ ನೀಡಿದೆ.

ಬೆಂಗಳೂರಿನಲ್ಲಿ ನಡೆದ ಜಂಟಿ ಸಭೆಯಲ್ಲಿ ಹೋರಾಟದ ತಯಾರಿಗಳ ಬಗ್ಗೆ ಚರ್ಚಿಸಿದ ಸಂಘಟನೆಗಳಾದ ಕರ್ನಾಟಕ ಪ್ರಾಂತ ರೈತ ಸಂಘ (ಎಐಕೆಎಸ್ ಸಂಯೋಜಿತ), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ (ಎಐಎಡಬ್ಲ್ಯೂಯು) ಸಂಘಟನೆಯ ಅಖಿಲ ಭಾರತ ಮುಖಂಡರು ಹಾಗೂ ರಾಜ್ಯ ಮುಖಂಡರು ಭಾಗವಹಿಸಿದ್ದರು.

ಸಭೆಗೆ ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಹೇಮಲತಾ, ಎಐಕೆಎಸ್ ಅಖಿಲ ಭಾರತ ಸಹಕಾರ್ಯದರ್ಶಿ ಬಿಜುಕೃಷ್ಣನ್, ಎಐಎಡಬ್ಲ್ಯೂಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವೆಂಕಟ್ ಭಾಗವಹಿಸಿದ್ದರು.
ರೈತ-ಕಾರ್ಮಿಕರ ಐಕ್ಯ ಹೋರಾಟವನ್ನು ಮುಂದುವರೆಸುವ ಬಗ್ಗೆ ಒಮ್ಮತದ ತೀರ್ಮಾನಗಳನ್ನು ಕೈಗೊಂಡ ಸಂಘಟನೆಗಳು, ಪರ್ಯಾಯ ಜನಪರ ನೀತಿಗಳ ಜಾರಿಗಾಗಿ ಪ್ರಚಾರಾಂದೋಲನದ ಮೂಲಕ ಜನಸಮುದಾಯವನ್ನು ವ್ಯಾಪಕವಾಗಿ ತಲುಪುವ ರೀತಿಯಲ್ಲಿ ಹಂತಹಂತವಾಗಿ ಪ್ರಚಾರ ನಡೆಯುವ ಬಗ್ಗೆ ಹಾಗೂ ಜನರ ಮೂಲಭೂತ ಸಮಸ್ಯೆಗಳೊಂದಿಗೆ ನಿರ್ದಿಷ್ಟವಾಗಿರುವ ಸ್ಥಳೀಯ ಬೇಡಿಕೆಗಳನ್ನು ಒಳಗೊಂಡು ಪ್ರಚಾರ ನಡೆಸುವುದು. ಪ್ರಚಾರದ ನಂತರ ಆಗಸ್ಟ್ 9ರಂದು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಜಂಟಿ ಸಂಘಟನೆಗಳು ಕರೆ ನೀಡಿವೆ.

ರೈತ ವಿರೋಧಿ ಕೃಷಿ ಕಾಯಿದೆ ಹಾಗೂ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕು, ಕೃಷಿ ಬೆಲೆಗಳಿಗೆ ಕಾನೂನು ಬದ್ಧ ಕನಿಷ್ಠ ಬೆಂಬಲ ಬೆಲೆ ನೀಡಬೇಕು, ಆಹಾರ ಧಾನ್ಯಗಳ ಉಚಿತ ರೇಷನ್ ನೀಡಬೇಕು, ಆದಾಯ ತೆರಿಗೆ ಮಿತಿಗೆ ಒಳಪಟ್ಟ ಆದಾಯವಿರುವ ಪ್ರತಿಯೊಬ್ಬರಿಗೂ ಮಾಸಿಕ ರೂ. 10,000 ಪರಿಹಾರ ನೀಡಬೇಕು, ಎಲ್ಲರಿಗೂ ಸಾರ್ವತ್ರಿಕ ಉಚಿತ ಲಸಿಕೆ ನೀಡಬೇಕು, ಸಾರ್ವಜನಿಕ ಉದ್ದಿಮೆಗಳ ಎಲ್ಲಾ ಸ್ವರೂಪದ ಖಾಸಗೀಕರಣವನ್ನು ಕೈಬಿಡಬೇಕು, ರಾಜ್ಯದಲ್ಲಿನ ಎಪಿಎಂಸಿ ಕಾಯಿದೆ, ಭೂಸುಧಾರಣಾ ಕಾಯಿದೆ, ಜಾನುವಾರು ಹತ್ಯೆ ತಡೆ ಕಾಯಿದೆಗಳಿಗೆ ಮಾಡಲಾಗಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಪ್ರಚಾರಾಂದೋಲನವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ 180 ತಾಲ್ಲೂಕುಗಳು, ನಗರ ಪ್ರದೇಶಗಳ ವಾರ್ಡ್ಗಳ ವ್ಯಾಪ್ತಿಯಲ್ಲಿ ಮತ್ತು 3000 ಗ್ರಾಮ ಪಂಚಾಯತಿಗಳಲ್ಲಿಯೂ ವ್ಯಾಪಕ ಪ್ರಚಾರಕ್ಕೆ ಸಂಘಟನೆಗಳು ಕರೆ ನೀಡಿವೆ. ಈ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆಗಳೊಂದಿಗೆ ಪಾದಯಾತ್ರೆ, ಸೈಕಲ್ ಜಾಥಾ, ಬೀದಿಬದಿ, ಮನೆಮನೆ ಪ್ರಚಾರಕ್ಕೂ ಕರೆ ನೀಡಿವೆ.
ಜಂಟಿ ಸಭೆಯಲ್ಲಿ ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್.ವರಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕೆಪಿಆರ್ ಎಸ್ ರಾಜ್ಯ ಅಧ್ಯಕ್ಷರಾದ ಜಿ ಸಿ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಯು.ಬಸವರಾಜ, ಎಐಎಡಬ್ಲ್ಯೂಯು ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕರ ಭಾಗವಹಿಸಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ