ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆ | ಕಾಶ್ಮೀರದಲ್ಲಿ ಗುಪ್ಕಾರ್ ಮೈತ್ರಿಕೂಟ, ಜಮ್ಮುವಿನಲ್ಲಿ ಬಿಜೆಪಿಗೆ ಭರ್ಜರಿ ಜಯ

Prasthutha|

ಶ್ರೀನಗರ : ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಮಾಡಿ, ಕೇಂದ್ರಾಡಳಿತವಾಗಿ ಘೋಷಿಸಲ್ಪಟ್ಟ ಬಳಿಕ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ನೇತೃತ್ವದ ಗುಪ್ಕಾರ್ ಮೈತ್ರಿಕೂಟ ಮತ್ತು ಜಮ್ಮು ವಲಯದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿವೆ.

- Advertisement -

ಜಮ್ಮು-ಕಾಶ್ಮೀರದ 20 ಜಿಲ್ಲೆಗಳ ಪೈಕಿ, ಗುಪ್ಕಾರ್ ಮೈತ್ರಿಕೂಟ 9 ಜಿಲ್ಲೆಗಳಲ್ಲಿ ಮತ್ತು ಜಮ್ಮು ವಲಯದಲ್ಲಿ ಬಿಜೆಪಿ ಆರು ಜಿಲ್ಲೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿವೆ.

ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಸ್ಥಳೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದುದರಿಂದ, ಸ್ಥಾನಗಳು ಈ ಪಕ್ಷಗಳ ನಡುವೆ ಹಂಚಿಹೋಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

- Advertisement -

ಗುಪ್ಕಾರ್ ಮೈತ್ರಿಕೂಟ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದೆ. ಆದರೆ, ಬಿಜೆಪಿ ಏಕಾಂಗಿಯಾಗಿ 74 ಸ್ಥಾನಗಳನ್ನು ಗೆದ್ದಿದೆ, ಅದರಲ್ಲಿ ಜಮ್ಮು ವಲಯದಲ್ಲಿ 71 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ ಮತ್ತು ಉಳಿದ ಮೂರು ಸ್ಥಾನಗಳನ್ನು ಕಾಶ್ಮೀರ ವಲಯದಲ್ಲಿ ಗೆದ್ದಿದೆ. ಕಾಂಗ್ರೆಸ್ 26 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಶ್ರೀನಗರ ಜಿಲ್ಲೆಯ ಫಲಿತಾಂಶ ಇನ್ನಷ್ಟೇ ಘೋಷಣೆಯಾಗಬೇಕಿದೆ. ವಿಜೇತರಲ್ಲಿ ಪಿಡಿಪಿ ಯುವ ಘಟಕದ ಅಧ್ಯಕ್ಷ ವಹೀದ್ ಪಾರಾ ವಿಜಯಿಯಾಗಿದ್ದು, ಅವರನ್ನು ಭಯೋತ್ಪಾದಕರ ನಂಟಿನ ಆರೋಪದಲ್ಲಿ ಅವರು ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಬಂಧಿಸಿತ್ತು.

ಫಾರೂಕ್ ಅಬ್ದುಲ್ಲಾ ವಿರುದ್ಧ ಜಾರಿ ನಿರ್ದೇಶನಾಲಯ ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ ಗೆ ಸಂಬಂಧಿಸಿದ ಅಕ್ರಮ ಹಣ ವ್ಯವಹಾರದ ಆರೋಪದಲ್ಲಿ ತನಿಖೆ ನಡೆಸುತ್ತಿದೆ. ಅವರ ಶ್ರೀನಗರ ಮತ್ತು ಜಮ್ಮುವಿನಲ್ಲಿರುವ ಎರಡು ಮನೆಗಳು ಸೇರಿದಂತೆ ಆಸ್ತಿಗಳನ್ನು ತನಿಖಾ ಸಂಸ್ಥೆಯು ಮುಟ್ಟುಗೋಲು ಹಾಕಿಕೊಂಡಿದೆ.

ಗುಪ್ಕಾರ್ ಮೈತ್ರಿಕೂಟದ ಪ್ರಮುಖ ಮುಖಂಡರುಗಳು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಚುನಾವಣಾ ಪ್ರಚಾರಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ.

Join Whatsapp