ಅರ್ನಾಬ್ ಗೋಸ್ವಾಮಿಯ ‘ರಿಪಬ್ಲಿಕ್ ಭಾರತ್’ ಟಿವಿ ಕಾರ್ಯಕ್ರಮಕ್ಕೆ ಇಂಗ್ಲೆಂಡ್ ನ ಸಂವಹನ ನಿಯಂತ್ರಕ ಇಲಾಖೆಯಿಂದ 19.82 ಲಕ್ಷ ರೂ. ದಂಡ

Prasthutha|

ಮುಂಬೈ : ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿಯ ಅಂಗಸಂಸ್ಥೆ, ಹಿಂದಿ ಸುದ್ದಿ ವಾಹಿನಿ ‘ರಿಪಬ್ಲಿಕ್ ಭಾರತ್’ ವಿರುದ್ಧ ಇಂಗ್ಲೆಂಡ್ ನ ಸಂವಹನ ನಿಯಂತ್ರಕ ಇಲಾಖೆ ಸುಮಾರು 20,000 ಪೌಂಡ್ಸ್ (19.82 ಲಕ್ಷ ರೂ.) ದಂಡ ವಿಧಿಸಿದೆ. ತನ್ನ ಕಾರ್ಯಕ್ರಮದಲ್ಲಿ ಅಪರಾಧಿಕ ಭಾಷೆ, ದ್ವೇಷ ಭಾಷಣ ಮತ್ತು ವ್ಯಕ್ತಿ, ಸಮೂಹ, ಧರ್ಮಗಳ ಅಥವಾ ಸಮುದಾಯಗಳ ವಿರುದ್ಧ ನಿಂದನಾತ್ಮಕ ಅಥವಾ ಅವಮಾನಕಾರಿ ವರದಿಗಾಗಿ ಈ ದಂಡ ವಿಧಿಸಲಾಗಿದೆ. ‘ರಿಪಬ್ಲಿಕ್ ಭಾರತ್’ ಈ ಕುರಿತು ತನ್ನ ಚಾನೆಲ್ ನಲ್ಲಿ ಕ್ಷಮೆ ಯಾಚಿಸುವಂತೆಯೂ ಆದೇಶಿಸಲಾಗಿದೆ.

2019, ಸೆ.6ರಂದು ತನ್ನ ಚಾನೆಲ್ ನಲ್ಲಿ ಪ್ರಸಾರವಾದ ‘ಪೂಚ್ತಾ ಹೇ ಭಾರತ್ (ಭಾರತ ಕೇಳುತ್ತಿದೆ)’ ಎಂಬ ಕಾರ್ಯಕ್ರಮದಲ್ಲಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಇತರ ಕೆಲವು ಅತಿಥಿಗಳು ತನ್ನ ಪ್ರಸಾರ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಇಂಗ್ಲೆಂಡ್ ನ ಸಂವಹನ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಂಗ್ಲೆಂಡ್ ನಲ್ಲಿ ರಿಪಬ್ಲಿಕ್ ಭಾರತ್ ಚಾನೆಲ್ ನ ಪ್ರಸಾರದ ಪರವಾನಿಗೆ ಹೊಂದಿರುವ ವರ್ಲ್ಡ್ ವೀವ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಮೇಲೆ ಈ ದಂಡ ವಿಧಿಸಲಾಗಿದೆ.

- Advertisement -