ಜಹಾಂಗೀರ್ ಪುರಿ ಹಿಂಸಾಚಾರ: ಮುಸ್ಲಿಮ್ ವ್ಯಕ್ತಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್

Prasthutha|

ನವದೆಹಲಿ: ದೆಹಲಿಯ ಜಹಾಂಗೀರ್ ಪುರಿಯಲ್ಲಿ ಕಳೆದ ಏಪ್ರಿಲ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮುಸ್ಲಿಮ್ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

- Advertisement -

ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರು ತಿಳಿಸಿರುವಂತೆ ಆರೋಪಿ ಬಾಬುದ್ದೀನ್ ಯಾವುದೇ ಗುಂಪನ್ನು ಹಿಂಸೆಗೆ ಪ್ರಚೋದಿಸದೆ ಸುಮ್ಮನೆ ನಿಂತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ ಎಂದು ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ. 43 ವರ್ಷದ ಬಾಬುದ್ದೀನ್ ಎಂಬಾತ ಹಿಂಸಾಚಾರ ನಡೆಸಿದ ಗುಂಪಿನ ನಾಯಕ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು.

ಕಳೆದ ಏಪ್ರಿಲ್ 16 ರಂದು ದೆಹಲಿಯ ಜಹಾಂಗೀರ್ ಪುರಿಯಲ್ಲಿ ಹನುಮ ಜಯಂತಿ ಸ್ಮರಣಾರ್ಥ ಬಜರಂಗದಳ ಸೇರಿದಂತೆ ಹಲವು ಹಿಂದುತ್ವ ಸಂಘಟನೆಗಳು ಮೆರವಣಿಗೆಗಳನ್ನು ಆಯೋಜಿಸಿತ್ತು. ಈ ವೇಳೆ ಕತ್ತಿ, ತ್ರಿಶೂಲ, ಬಂದೂಕು ಮತ್ತು ಮಾರಕಾಯುಧಗಳನ್ನು ಪ್ರದರ್ಶಿಸಲಾಗಿತ್ತು ಎಂದು ಸ್ಥಳೀಯರು ದೂರಿದ್ದರು.

- Advertisement -

ಅಲ್ಲದೆ ಸಂಘಪರಿವಾರದ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿ ದಾಂಧಲೆ ಆರಂಭಿಸಿದ್ದರು ಮತ್ತು ಮುಸ್ಲಿಮರ ವಿರುದ್ಧ ನರಮೇಧಕ್ಕೆ ಕರೆ ನೀಡಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು. ಈ ಸಂದರ್ಭದಲ್ಲಿ ಮಸೀದಿಯನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಲಾಗಿತ್ತು. ಇದರ ಹೊರತಾಗಿಯೂ ಪೊಲೀಸರು ಹಿಂಸಾಚಾರದ ಆರೋಪದಲ್ಲಿ ಹಲವು ಮುಸ್ಲಿಮರನ್ನು ಬಂಧಿಸಿ ಜೈಲಿಗಟ್ಟಿದ್ದರು.

ಪ್ರಾಸಿಕ್ಯೂಷನ್ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಸುಳ್ಳು ಮತ್ತು ಕಪೋಲಕಲ್ಪಿತ ಕಥೆಯನ್ನು ಹೆಣೆಯುತ್ತಿದೆ ಎಂದು ಬಾಬುದ್ದೀನ್ ಅವರು ತನ್ನ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

Join Whatsapp