ಐಟಿ ಕ್ಯಾಪಿಟಲ್ ಬೆಂಗಳೂರು ಇಂದು ಡ್ರಗ್ಸ್ ಕ್ಯಾಪಿಟಲ್, ಟೆನ್ಷನ್ ಸಿಟಿಯಾಗಿ ಮಾರ್ಪಾಡಾಗುತ್ತಿದೆ: ಕೃಷ್ಣಭೈರೇಗೌಡ

Prasthutha|

ಬೆಂಗಳೂರು: ಇಂದು ನಾವೆಲ್ಲ ಬೆಂಗಳೂರಿನ ಪರಿಸ್ಥಿತಿ ನೋಡುತ್ತಿದ್ದೇವೆ. ಬೆಂಗಳೂರು ಪ್ರಪಂಚದಲ್ಲಿ ಐಟಿ ಕ್ಯಾಪಿಟಲ್, ಸ್ಟಾರ್ಟ್ ಅಪ್ ಕ್ಯಾಪಿಟಲ್, ವಿಜ್ಞಾನ ಹಾಗೂ ತಂತ್ರಜ್ಞಾನದ ಕೇಂದ್ರವಾಗಿ ಸೇವೆ ಸಲ್ಲಿಸಿತ್ತು. 2015-16ರಲ್ಲಿ ವರ್ಲ್ಡ್ ಮೋಸ್ಟ್ ಡೈನಾಮಿಕ್ ಸಿಟಿ ಆಗಿ ಹೊರಹೊಮ್ಮಿತ್ತು. ಆದರೆ ಇಂದು ಅತಿ ಹೆಚ್ಚು ರಸ್ತೆ ಗುಂಡಿ ನಗರ, ಮುಳುಗುತ್ತಿರುವ ನಗರವಾಗುತ್ತಿದೆ. ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ. ದಿನ ಬೆಳಗಾಗರೆ ಮೈದಾನ, ಮಸೀದಿ, ದೇವಾಲಯ ವಿಚಾರವಾಗಿ ಟೆನ್ಷನ್ ಸಿಟಿ ಆಗಿ ಮಾರ್ಪಾಡಾಗುತ್ತಿದೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ  ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದ ಬೆಂಗಳೂರು ಇಂದು ಈ ರೀತಿ ಕುಖ್ಯಾತಿ  ಪಡೆಯುತ್ತಿರುವುದೇಕೆ ಎಂದು ಬೆಂಗಳೂರು ನಿವಾಸಿಗಳ ಪರವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನಿಸಲು ಬಯಸುತ್ತಿದೆ. ಬೆಂಗಳೂರಿಗೆ ಅವಶ್ಯಕವಾಗಿರುವ ಆಡಳಿತವೇ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಆಡಳಿತ ವ್ಯವಸ್ಥೆ ಇದೆಯಾ? ಬೆಂಗಳೂರಿನ ಹೊಣೆಗಾರಿಕೆ ಯಾರದ್ದು? ಯಾರನ್ನು ಕೇಳಬೇಕು? ಮುಖ್ಯಮಂತ್ರಿಗಳು ರಾಜ್ಯವನ್ನು ನೋಡಬೇಕು ಕೇವಲ ಬೆಂಗಳೂರನ್ನು ನೋಡಲು ಆಗುವುದಿಲ್ಲ. ಆದರೂ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ನೀಡಿಲ್ಲ. ಅದಕ್ಕೆ ಕಾರಣ ಬಿಜೆಪಿಯಲ್ಲಿ ಅಧಿಕಾರದ ಆಂತರಿಕ ಗುದ್ದಾಟ ಎಂದು ಅವರು ನೇರ ಆರೋಪ ಮಾಡಿದರು.

ಅಧಿಕಾರಿಗಳನ್ನು ಅಲ್ಲಿ ಕೂರಿಸಿರುವುದು ಆಡಳಿತ ಮಾಡಲು ಅಲ್ಲ, ಬಿಜೆಪಿಗೆ ಹಣ ಹುಟ್ಟಿಸಲು. ಹೀಗಾಗಿ ದುರಾಡಳಿತ ತಾಂಡವ ನೃತ್ಯದಿಂದ ಬೆಂಗಳೂರು ಮುಳುಗುತ್ತಿರುವ ನಗರವಾಗಿದೆ. ಇನ್ನು ಬೆಂಗಳೂರಿನ ದುಸ್ಥಿತಿಗೆ 40% ಕಮಿಷನ್ ಕಾರಣ. ಬಿಬಿಎಂಪಿ ಗುತ್ತಿಗೆದಾರರು ಹೇಳಿರುವಂತೆ 50% ಲಂಚ ಸ್ವೀಕರಿಸಿದ ನಂತರ ಯಾವ ರಸ್ತೆಗಳು, ಮೇಲ್ಸೇತುವೆಗಳು, ಕಾಲುವೆ ಉಳಿಯುತ್ತವೇ? ಒಂದೇ ವಾರದಲ್ಲಿ ಮೇಲ್ಸೇತುವೆ ಬಂದ್ ಆಗುತ್ತದೆ. 50% ಕಮಿಷನ್ ಪಡೆದ ಮೇಲೆ ಉಳಿದ 50%ನಲ್ಲಿ ಮಾಡಿದ ಕಾಮಗಾರಿ ಹೆಚ್ಚು ಬಾಳಿಕೆ ಬರಲು ಹೇಗೆ ಸಾಧ್ಯ? ಈ ಕಮಿಷನ್ ಬಗ್ಗೆ ಉಡಾಫೆಯಿಂದ ಮಾತನಾಡುವವರಿಗೆ ಇಂದು ಬೆಂಗಳೂರಿನ ಪರಿಸ್ಥಿತಿ ದರ್ಶನವಾಗುತ್ತಿಗದೆ. ಕೇವಲ 5 ವರ್ಷಗಳಲ್ಲಿ ಭ್ರಷ್ಟಾಚಾರದ ಆಡಳಿತದಿಂದ ಬೆಂಗಳೂರಿಗೆ ಕುಖ್ಯಾತಿ ಬಂದಿರುವುದು, ಜನರ ಕಷ್ಟ ಹಾಗೂ ಶಾಪ ಸಾಕ್ಷಿಯಾಗಿದೆ ಎಂದು ಹೇಳಿದರು.

- Advertisement -

ಇಲ್ಲಿನ ಸರ್ಕಾರ, ಜನಪ್ರತಿನಿಧಿಗಳು ಸರ್ಕಾರದ ಬಜೆಟ್ ಅನ್ನು ಶೇ.80ರಷ್ಟು ರಸ್ತೆ ಹಾಗೂ ಚರಂಡಿಗೆ ಹಾಕುತ್ತಾರೆ. ಹಳೇ ಕಲ್ಲು, ಹೊಸ ಬಿಲ್ಲು ಎಂಬಂತೆ ಮಾಡಿ 50% ಹಣ ಲೂಟಿ ಮಾಡುತ್ತಿದ್ದಾರೆ. ಒಂದೇ ಕೆಲಸಕ್ಕೆ ಎರಡು ಬಿಲ್ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬೇಕಾಗಿರುವ ರಾಜಕಾಲುವೆ, ಮೇಲ್ಸೆತುವೆಗಳನ್ನು ಬಿಟ್ಟು, ಕೇವಲ ಹಣ ಲೂಟಿ ಮಾಡಲು ಬೇಕಾದ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಹಿಂದೆ ಸರ್ಕಾರದಲ್ಲಿ ರಾಜಕಾಲುವೆಗೆ ಹೆಚ್ಚಿನ ಹಣ ನೀಡಲಾಗುತ್ತಿತ್ತು. ಈ ಸರ್ಕಾರ ಅದಕ್ಕೆ ಎಳ್ಲು ನೀರು ಬಿಟ್ಟು ಹಣ ಲೂಟಿಗೆ ಮುಂಗದಾಗಿದ್ದರ ಪರಿಣಾಮ ಬೆಂಗಳೂರಿಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸರ್ಕಾರ ಬಂದ ನಂತರ ಎಷ್ಟು ಹೊಸ ಮೇಲ್ಸೆತುವೆ ಕಾಮಗಾರಿಗೆ ಚಾಲನೆ ಸಿಕ್ಕಿದೆ? ಆದರೆ ಸರ್ಕಾರದ ಹಣ ಎಲ್ಲಿ ಹೋಗುತ್ತಿದೆ? ಈ ಙಣ ಬಿಜೆಪಿ ನಾಯಕರ ಜೇಬು ಸೇರುತ್ತಿದೆ. ಬಿಜೆಪಿಯವರ ಪಾಲಿಗೆ ಬೆಂಗಳೂರು ಐಟಿ ಕ್ಯಾಪಿಟಲ್, ಡೈನಮಿಕ್ ಸಿಟಿ, ವಿಜ್ಞಾನ ತಂತ್ರಜ್ಞಾನ ಕೇಂದ್ರವಾಗುವುದೂ ಬೇಕಿಲ್ಲ. ಅವರಿಗೆ ಬೆಂಗಳೂರು ದುಡ್ಡು ಮಾಡುವ ನಗರವಾಗಿದೆ. ಇದರ ಪರಿಣಾಮವಾಗಿ ಜನ ಬೀದಿಗೆ ಬಿದ್ದಿದ್ದಾರೆ. ಬೆಂಗಳೂರಿನ ಮುಕ್ಕಾಲು ಪಾಲು ಪ್ರದೇಶದಲ್ಲಿ ಹಾನಿ ಆಗಿದೆ ಎಂದು ಹೇಳಿದರು.

ಪ್ರಧಾನಿಗಳು ಬೆಂಗಳೂರಿಗೆ ಬಂದಾಗ ಅವರು ಸಂಚರಿಸುವ ರಸ್ತೆಗೆ ಸಿಂಗಾರ ಮಾಡಲು 26 ಕೋಟಿ ಖರ್ಚು ಮಾಡುತ್ತಾರೆ. ಆದರೆ ಜನ ಸಮಸ್ಯೆಗೆ ಸಿಲುಕಿರುವ ಪ್ರದೇಶದಲ್ಲಿ ಅಭಿವೃದ್ಧಿಗೆ ಖರ್ಚು ಮಾಡುತ್ತಿಲ್ಲ. ಸರ್ಕಾರ ಎಳ್ಲಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ? ಪ್ರಧಾನಿಗಾಗಿ ಖರ್ಚು ಮಾಡಲು ಹಣವಿದೆ, ರಾಜಕಾಲುವೆ ಮಾಡಲು, ರಸ್ತೆ ಗುಂಡಿ ಮುಚ್ಚಲು ಹಣವಿಲ್ಲವೇ? ಬಿಜೆಪಿ ಸರ್ಕಾರಕ್ಕೆ ಮೋದಿ ಹಾಗೂ ಅಮಿತ್ ಶಾ ಅವರ ಅಭಯ ಹಸ್ತದಿಂದ ಈ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇವರು 50% ಅಲ್ಲ 100% ಹಣ ತಿಂದರೂ ಯಾವುದೇ ಇಡಿ, ಐಟಿ, ಆದಾಯ ತೆರಿಗೆ ಇಲಾಖೆ ರೈಡ್ ಆಗುವುದಿಲ್ಲ, ಯಾವುದೇ ಕೇಸ್ ದಾಖಲಾಗುವುದಿಲ್ಲ ಎಂಬ ಅಭಯ ಸಿಕ್ಕಿದೆ. ಹೀಗಾಗಿ ಅವರು ಭ್ರಷ್ಟಾಚಾರವನ್ನು ಗಗನಕ್ಕೆ ಮುಟ್ಟಿಸಿದ್ದಾರೆ. ಇವರನ್ನು ಪ್ರಶ್ನೆ ಕೇಳುವವರೆ ರಕ್ಷಣೆಗೆ ನಿಂತಿದ್ದಾರೆ. ಇಡಿ, ಸಿಬಿಐ, ಐಟಿ ಅಫ್ಪಿತಪ್ಪಿಯೂ ಬಿಜೆಪಿಯವರನ್ನು ಪ್ರಶ್ನಿಸುವುದಿಲ್ಲ. ಈ ಸಂಸ್ಥೆಗಳು ರಾಜಕೀಯ ಅಸ್ತ್ರವಾಗಿವೆ. ಈ ಭ್ರಷ್ಟಾಚಾರಕ್ಕೆ ಅಮಿತ್ ಶಾ, ಹಾಗೂ ಮೋದಿ ಅವರ ಆಶೀರ್ವಾದವಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

 ಬಿಜೆಪಿಗೆ ಹತ್ತಿರವಾಗಿರುವ ಮೋಹನ್ ದಾಸ್ ಪೈ, ಬೆಂಗಳೂರಿನ ಆಕಾನ್ ಆಗಿರುವ ಕಿರಣ್ ಮಜೂಮ್ದಾರ್ ಶಾ ಅವರು ನೇರವಾಗಿ ಪ್ರಧಾನಿಗಳಿಗೆ ಹಲವು ಬಾರಿ ಬೆಂಗಳೂರು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಆದರೂ ಮೋದಿಗೆ ಹಾಗೂ ಅಮಿತ್ ಶಾ ಅವರಿಗೆ ಬೆಂಗಳೂರು ರಕ್ಷಿಸುವ ಮನಸ್ಸಿಲ್ಲ. ಅವರಿಗೆ ಕೇವಲ ಅಧಿಕಾರಕ್ಕೆ ಬರಬೇಕು. 40% ಲೂಟಿ ಮಾಡಬೇಕು. ರಿಯಲ್ ಎಸ್ಟೇಟ್ ಲೂಟಿ ಮಾಡಬೇಕು. ಇಷ್ಟೇ ಅವರ ಆದ್ಯತೆಯಾಗಿದೆ ಎಂದು ಕಿಡಿಕಾರಿದರು.

ಈ ಮಟ್ಟದ ಭ್ರಷ್ಟಾಚಾರ ಮಾಡಿ ರಾಜಕಾರಣಿಗಳು ನೈತಿಕತೆ ಉಳಿಸಿಕೊಂಡಿದ್ದಾರಾ ಎಂಬ ಮಾಧ್ಯಮದ ಪ್ರಶ್ನೆಗೆ, ‘ರಾಜಕಾರಣದಲ್ಲಿ ನೈತಿಕತೆ ಎಂಬುದು ಕೇವಲ ಹೆಸರಿಗೆ ಉಳಿದಿದೆ. ಹಾಗೆಂದು ಎಲ್ಲರೂ ಭ್ರಷ್ಟರು ಎಂದು ಹೇಳುವುದಿಲ್ಲ. ಶುದ್ಧಹಸ್ತದಿಂದ ಕೆಲಸ ಮಾಡುವವರು ಹಲವುರು ಇದ್ದಾರೆ. ಒಂದು ಪ್ರಮಾಣದವರು ಮಾತ್ರ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಆದರೆ ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಇರಲಿಲ್ಲವೇ ಎಂಬ ಸಮರ್ಥನೆಗೆ ಮುಂದಾಗುವುದು ಘೋರ ಅಪರಾಧ. ಹಾಗಾದರೆ ನಿಮ್ಮನ್ನು ಭ್ರಷ್ಟಾಚಾರ ಮಾಡಲು ಜನ ಅಧಿಕಾರದ್ದಲ್ಲಿ ಕೂರಿಸಿದ್ದಾರಾ? ಯಾರೋ 5 ಪರ್ಸೆಂಟ್ ತಿಂದರು ಎಂದು ನಿಮಗೆ 50 ಪರ್ಸೆಂಟ್ ತಿನ್ನಲು ಕೂರಿಸಿದ್ದಾರಾ? ಈ ಮಾತುಗಳು ದುರಹಂಕಾರದ ಪರಮಾವಧಿ. ಕಾರಣ ಇಡೀ ದೇಶದಲ್ಲಿ ನಮ್ಮ ವಿರುದ್ಧ ಕೇಸು ಹಾಕುವವರು ಯಾರೂ ಇಲ್ಲ. ನಾವು ಹೇಳಿದ್ದೇ ಕಾನೂನು ಎಂಬ ದರ್ಪ ಬಿಜೆಪಿಯವರಲ್ಲಿದೆ. ಇದನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಬಾಯಿ ಮಾತಿಗೂ ಹೇಳುತ್ತಿಲ್ಲ. ದೆಹಲಿಯಲ್ಲಿ ಜಿಎಸ್ ಟಿ ಇದ್ದರೆ ರಾಜ್ಯದಲ್ಲಿ ವಿಎಸ್ ಟಿ ಇದೆ ಎಂದು ಪ್ರಚಲಿತವಾಗಿತ್ತು. ಅಂದಿನಿಂದ ಭ್ರಷ್ಟಾಚಾರದ ಆರೋಪ ಇದ್ದರೂ ಈ ಭ್ರಷ್ಟಾಚಾರ ನಿಯಂತ್ರಿಸಲು ಪ್ರಯತ್ನ ಮಾಡುತ್ತಿಲ್ಲ. ನಿಗ್ರಹ ಮಾಡುವುದರ ಬದಲು ಆರೋಪ ಮಾಡಿದವರ ವಿರುದ್ಧವೇ ದಾಳಿ ಮಾಡುತ್ತಿದ್ದಾರೆ. ಅವರು ಸರ್ಕಾರ ಮಾಡಿದ್ದೆ ಲೂಟಿ ಮಾಡಿದ್ದ ಹಣದಲ್ಲಿ. ಅದಕ್ಕಾಗಿ 100 ಪಟ್ಟು ಲೂಟಿ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಸಜ್ಜಾಗುತ್ತಿದೆ. ಇವರು ಕ್ರಮ ಕೈಗೊಳ್ಳದಿದ್ದರೆ ಜನರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಜನರ ಆಕ್ರೋಶ ಕಟ್ಟೆ ಹೊಡದರೆ ಇವರು ಕೊಚ್ಚಿಕೊಂಡು ಹೋಗುತ್ತಾರೆ’ ಎಂದು ತಿಳಿಸಿದರು.

ಬೆಂಗಳೂರು ಡ್ರಗ್ಸ್ ನಗರವಾಗುತ್ತಿರುವುದಕ್ಕೆ ಕಾರಣ ಏನು ಎಂದು ಕೇಳಿದಾಗ, ‘ಬೆಂಗಳೂರಿನಲ್ಲಿ ಡ್ರಗ್ಸ್ ಮೂಲೆ ಮೂಲೆಗೆ ಹರಡಲು ಸರ್ಕಾರದ ಪ್ರಾಯೋಜಕತ್ವವೇ ಕಾರಣ. ಆರಂಭದಲ್ಲಿ ಸಿನಿಮಾ ತಾರೆಯರನ್ನು ಬಂಧಿಸಿ ಡ್ರಾಮಾ ಮಾಡಿದರು. ನಂತರ ಡ್ರಗ್ಸ್ ಹಾವಳಿ ಕಡಿಮೆಯಾಗಿದೆಯೇ ಅಥವಾ ಐದು ಪಟ್ಟು ಹೆಚ್ಚಾಗಿದೆಯೇ? ಬಿಜೆಪಿಯವರು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಈ ಡ್ರಾಮ ಮಾಡಿದ್ದರು. ಸರ್ಕಾರದವರೆ ಪರೋಕ್ಷವಾಗಿ ಡ್ರಗ್ಸ್ ಗೆ ಸಹಕಾರ ನೀಡುತ್ತಿದ್ದಾರೆ. ಇದನ್ನು ನಿಯಂತ್ರಿಸುತ್ತಿಲ್ಲ’ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

Join Whatsapp