ಮಕ್ಕಳಿಗೆ ಸಂಸ್ಕಾರ ಕಲಿಸುವ ಹೊಣೆ ಶಿಕ್ಷಕರ ಮೇಲಿದೆ; ಕೆ.ಗೋಪಾಲಯ್ಯ

Prasthutha|

ಬೆಂಗಳೂರು: ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕಾದ ಹೊಣೆ ಶಿಕ್ಷಕರ ಮೇಲಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಶನಿವಾರ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ವತಿಯಿಂದ ನಾಗಪುರದಲ್ಲಿರುವ ಶಾಸಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ 4 ಹೈಟೆಕ್ ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡಲಾಗಿದ್ದು. ಈ ರೀತಿಯ ಶಾಲೆಗಳು ರಾಜ್ಯದಲ್ಲಿಯೇ ಎಲ್ಲೂ ಇಲ್ಲ. ಮುಂದಿನ ವರ್ಷದಿಂದ ಆರಂಭವಾಗಲಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಈ ಸರ್ಕಾರಿ ಶಾಲೆಗಳನ್ನು. 45 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದಾಗಿನಿಂದಲೂ ಇಂದಿನವರೆಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲೂ ಮಕ್ಕಳು ಮತ್ತು ಕ್ಷೇತ್ರದ ಸರ್ವರ ಹಿತಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.
ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು. ಇದಕ್ಕಾಗಿ ಮಹಾಲಕ್ಷ್ಮೀ ಎಜುಕೇಷನ್ ಟ್ರಸ್ಟ್ ನಿಂದ ಎಲ್ಲ ಅಗತ್ಯ ನೆರವು ನೀಡಲಾಗುವುದು. ಇದೇ ಅಕ್ಟೋಬರ್ 10 ರಿಂದ ಎಸ್ಎಸ್ ಎಲ್ ಸಿ ಮಕ್ಕಳಿಗೆ ವಿಶೇಷ ತರಗತಿಗಳನ್ನು ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಮಹಾಲಕ್ಷ್ಮೀ ಲೇ ಔಟ್ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಮಾದರಿಯಾಗಬೇಕು. ಇದಕ್ಕಾಗಿ ಎಲ್ಲ ಅಗತ್ಯ ನೆರವು ನೀಡಲಾಗುವುದು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಆರ್.ದೇವೇಗೌಡ, ಪುಟ್ಟಣ್ಣ , ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ, ಎಂ.ಬಿ.ಲಕ್ಷ್ಮಿ ನಾರಾಯಣ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್,ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ,ವೆಂಕಟೇಶ್ ಮಾಮ, ಶ್ರೀನಿವಾಸ್,ವೆಂಕಟೇಶ್ ಮೂರ್ತಿ,ಶ್ರೀಮತಿ ಯಶೋಧಾ ನಾರಾಯಣ್, ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಗಿರಿಗೌಡ, ರಾಮಕೃಷ್ಣಯ್ಯ, ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಮಹಾಸ್ವಾಮಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

Join Whatsapp