ಇಸ್ರೇಲ್ ಕ್ರೂರವಾಗಿ ವರ್ತಿಸುವುದು ತಪ್ಪು: ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್ ಪರ ನಿಂತ ಭಾರತ

Prasthutha|

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಭಾರತವು ಮತ್ತೊಮ್ಮೆ ಪ್ಯಾಲೆಸ್ತೀನ್ ಪರವಾಗಿ ನಿಂತಿದೆ. ಗಾಝಾ ನಾಗರಿಕರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಬಲವಾಗಿ ಖಂಡಿಸಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಪ್ಯಾಲೆಸ್ತೀನ್ ಜನರೊಂದಿಗೆ ದೇಶದ ದೀರ್ಘಕಾಲದ ಸಂಬಂಧವನ್ನು ಪುನರುಚ್ಚರಿಸಿಸಿದ್ದಾರೆ ಮತ್ತು ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ದೊಡ್ಡ ಪ್ರಮಾಣದ ನಾಗರಿಕರ ಪ್ರಾಣಹಾನಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

- Advertisement -

ಇಂದು (ನ. 29) ಜಗತ್ತು ಪ್ಯಾಲೆಸ್ತೀನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ರುಚಿರಾ ಕಾಂಬೋಜ್, ಭಾರತ ಮತ್ತು ಪ್ಯಾಲೆಸ್ತೀನ್ ನಡುವಿನ ಆಳವಾದ ಐತಿಹಾಸಿಕ ಸಂಬಂಧಗಳನ್ನು ಮತ್ತು ರಾಜ್ಯತ್ವ, ಶಾಂತಿ ಮತ್ತು ಸಮೃದ್ಧಿಯ ಅನ್ವೇಷಣೆಯಲ್ಲಿ ಪ್ಯಾಲೆಸ್ತೀನ್ ಜನರಿಗೆ ಭಾರತದ ನಿರಂತರ ಬೆಂಬಲವನ್ನು ಎತ್ತಿ ತೋರಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಸಮಯದಲ್ಲಿ ನಾವು ಇಂದು ಸಭೆ ಸೇರಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ ರುಚಿರಾ ಕಾಂಬೋಜ್, ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ನಾಗರಿಕರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಬೃಹತ್ ಪ್ರಮಾಣದಲ್ಲಿ ಜೀವಹಾನಿಗೊಳಗಾಗಿದ್ದಾರೆ. ಅಪಾಯಕಾರಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದು ಯಾವ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಮತ್ತು ನಾಗರಿಕರ ಸಾವುಗಳನ್ನು ನಾವು ಬಲವಾಗಿ ಖಂಡಿಸಿದ್ದೇವೆ ಎಂದಿದ್ದಾರೆ. ಮುಂದುವರೆದು ಮಾತನಾಡಿದ ಭಾರತ ಪ್ರತಿನಿಧಿ, ಈ ಮಾನವೀಯ ಬಿಕ್ಕಟ್ಟನ್ನು ಎದುರಿಸುವಲ್ಲಿ ಎಲ್ಲಾ ಪಕ್ಷಗಳಿಗೆ ಹೆಚ್ಚಿನ ಜವಾಬ್ದಾರಿಯನ್ನ ಪ್ರದರ್ಶಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ, ಉದ್ವಿಗ್ನತೆಯನ್ನ ಕಡಿಮೆ ಮಾಡುವ ಮತ್ತು ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ನೀಡುವ ಅಂತಾರಾಷ್ಟ್ರೀಯ ಸಮುದಾಯದ ಎಲ್ಲಾ ಪ್ರಯತ್ನಗಳನ್ನ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.



Join Whatsapp