ಸಿರಿಯಾದ ಅಲೆಪ್ಪೊ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಅಪಾರ ಹಾನಿ

Prasthutha|

ಅಲೆಪ್ಪೊ: ಸಿರಿಯಾದ ಅಲೆಪ್ಪೊ ವಿಮಾನ ನಿಲ್ದಾಣದ ಮೇಲೆ ಇಸ್ರೇಲಿ ಸೈನಿಕರು ವೈಮಾನಿಕ ದಾಳಿ ನಡೆಸಿದ್ದು, ವಿಮಾನ ನಿಲ್ದಾಣಕ್ಕೆ ಅಪಾರ “ಭೌತಿಕ ಹಾನಿ” ಉಂಟಾಗಿದೆ ಎಂದು ಸಿರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ತಿಂಗಳಲ್ಲಿ ಇಸ್ರೇಲ್ ನಡೆಸುತ್ತಿರುವ ಎರಡನೇ ದಾಳಿ ಇದಾಗಿದೆ.
ಇಸ್ರೇಲ್, “ಕರಾವಳಿ ನಗರ ಲಟಾಕಿಯಾದ ಪಶ್ಚಿಮಕ್ಕಿರುವ ಮೆಡಿಟರೇನಿಯನ್ ಸಮುದ್ರದಿಂದ ಮುಂಜಾನೆ 3:55 ಕ್ಕೆ ಹಲವು ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ” ಎಂದು ರಕ್ಷಣಾ ಸಚಿವಾಲಯ ಬುಧವಾರ ಮುಂಜಾನೆ ಫೇಸ್’ಬುಕ್’ನಲ್ಲಿ ತಿಳಿಸಿದೆ.
ಅಲೆಪ್ಪೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಆರು ತಿಂಗಳಲ್ಲಿ ಇಸ್ರೇಲ್ ನಡೆಸುತ್ತಿರುವ ಮೂರನೇ ದಾಳಿ ಇದಾಗಿದೆ.
ದಾಳಿಯಿಂದ ಸಾವು ನೋವು ಉಂಟಾಗಿದೆಯೇ ಎಂಬುದು ತಿಳಿದಿಲ್ಲ. ಮೆಡಿಟರೇನಿಯನ್ ಸಮುದ್ರದ ಮೇಲಿನಿಂದ ಇಸ್ರೇಲಿ ಯುದ್ಧವಿಮಾನಗಳು ಸಿರಿಯಾದ ಅತಿದೊಡ್ಡ ನಗರ ಮತ್ತು ಒಂದು ಕಾಲದಲ್ಲಿ ಅದರ ವಾಣಿಜ್ಯ ಕೇಂದ್ರವಾದ ಅಲೆಪ್ಪೊ ಕಡೆಗೆ ಕ್ಷಿಪಣಿಗಳನ್ನು ಹಾರಿಸಿದವು ಎಂದು ವರದಿ ತಿಳಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ಇಸ್ರೇಲ್ ಮಿಲಿಟರಿ ನಿರಾಕರಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೆಬ್ರವರಿ 6 ರಂದು ದಕ್ಷಿಣ ಟರ್ಕಿ ಮತ್ತು ವಾಯವ್ಯ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದಾಗಿನಿಂದ ಅಲೆಪ್ಪೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶಕ್ಕೆ ಮಾನವೀಯ ನೆರವಿನ ಹರಿವಿಗೆ ಪ್ರಮುಖ ಮಾರ್ಗವಾಗಿದೆ.
ಈ ತಿಂಗಳ ಆರಂಭದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲೆಪ್ಪೊ ವಿಮಾನ ನಿಲ್ದಾಣದ ರನ್ ವೇಗೆ ಹಾನಿಯಾಗಿತ್ತು ಎಂದು ಸಿರಿಯನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಪರಿಣಾಮ ಆ ರನ್ ವೇಯ ಸೇವೆಯನ್ನು ರದ್ದುಪಡಿಸಲಾಗಿದೆ.

Join Whatsapp