ಅಮೆರಿಕಾ ಮಧ್ಯಸ್ಥಿಕೆ । ಇಸ್ರೇಲ್ ಜೊತೆ ಯುಎಇ ಬಹ್ರೈನ್ ‘ಸಹಜಸ್ಥಿತಿ’ ಗೆ ಅಧಿಕೃತ ಸಹಿ !

► ‘ಕರಾಳ ದಿನ’ ಎಂದ ಫೆಲೆಸ್ತೀನಿಗರು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಯುಎಇ ಹಾಗೂ ಬಹ್ರೈನ್ ರಾಷ್ಟ್ರಗಳು ಇಸ್ರೇಲ್ ಜೊತೆಗಿನ ತಮ್ಮ ರಾಜತಾಂತ್ರಿಕ ಸಂಬಂಧದಲ್ಲಿ ‘ಸಹಜ ಸ್ಥಿತಿ’ ಸ್ಥಾಪನೆಗೆ ಬೇಕಾಗಿ ಅಧಿಕೃತ ಮುದ್ರೆ ಒತ್ತಿದೆ. ಶ್ವೇತಭವನದಲ್ಲಿ ನಡೆದ ಈ ಕಾರ್ಯಕ್ರಮ ಇರಾನ್ ವಿರುದ್ಧ ಕೊಲ್ಲಿ ರಾಷ್ಟ್ರಗಳನ್ನು ಒಂದುಗೂಡಿಸುವಿಕೆಯ ವ್ಯವಸ್ಥಿತ ಕಾರ್ಯತಂತ್ರದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.  ಯುಎಇ ಈ ಹಿಂದೆಯೇ ಸಹಜ ಸ್ಥಿತಿ ಸ್ಥಾಪನೆಯನ್ನು ಘೋಷಿಸಿತ್ತು.

- Advertisement -

ಟ್ರಂಪ್ ಮುಂದಾಳತ್ವದಲ್ಲಿ ಶ್ವೇತಭವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಯುಎಇ ವಿದೇಶ ಮಂತ್ರಿ ಶೇಖ್ ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಮತ್ತು ಬಹ್ರೈನ್ ವಿದೇಶ ಮಂತ್ರಿ ಅಬ್ದುಲ್ಲತೀಫ್ ಅಲ್ ಝಯಾನಿ ಅವರೊಂದಿಗೆ ಈ ಅಧಿಕೃತವಾಗಿ ಸಹಿ ಹಾಕುವ ಮೂಲಕ ಈ ದೇಶಗಳ ನಡುವಿನ ರಾಜತಾಂತ್ರಿಕ ಸಹಜಸ್ಥಿತಿ ಮರಳಿದಂತಾಗಿದೆ. ಜೋರ್ಡಾನ್ ಮತ್ತು ಈಜಿಪ್ಟ್ ನಂತರ ಇವೆರಡು ದೇಶಗಳು ಈಗ ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧ ಶುರು ಮಾಡಿದಂತಾಗಿದೆ.

ಒಪ್ಪಂದದ ಹಿಂದೆ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕಾ ಅಧ್ಯಕ್ಷ ಟ್ರಂಪ್, “ ಈ ಒಪ್ಪಂದದಿಂದಾಗಿ ಇನ್ನು ಮುಂದೆ ಮಧ್ಯಪ್ರಾಚ್ಯದ ಜನರು ಇಸ್ರೇಲ್ ವಿರುದ್ಧದ ಧ್ವೇಷಭಾವನೆ ಹೊಂದುವುದನ್ನು ತಡೆಯುತ್ತದೆ” ಎಂದಿದ್ದಾರೆ. ಈ ಒಪ್ಪಂದಗಳು ನಿಧಾನವಾಗಿ ಇತರೆ ಅರಬ್ ರಾಷ್ಟ್ರಗಳೊಂದಿಗೆ ಕೂಡಾ ಮುಂದುವರೆಯಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.

‘ದುಃಖದ ದಿನವಾಗಿದೆ’

ಅರಬ್ ರಾಷ್ಟ್ರಗಳೊಂದಿಗಿನ ಈ ಒಪ್ಪಂದ ನಮ್ಮ ಪಾಲಿಗೆ ‘ದುಃಖದ ದಿನ’ವಾಗಿದೆ ಎಂದು ಫೆಲೆಸ್ತೀನ್ ನ ಬಹುಪಕ್ಷೀಯ ವಿದೇಶ ಕಾರ್ಯಗಳ ಮಂತ್ರಿ ಅಮ್ಮರ್ ಹಿಜಾಝಿ ಹೇಳಿದ್ದಾರೆ.  ಫೆಲೆಸ್ತೀನಿಗರ ಪಾಲಿಗೆ ಶಾಂತಿಯ ಏಕೈಕ ಮಾರ್ಗವೆಂದರೆ ಈ ಆಕ್ರಮಣಕಾರಿ ಇಸ್ರೇಲಿನ ಕ್ರೌರ್ಯವನ್ನು ಕೊನೆಗೊಳಿಸುವುದಾಗಿದೆ ಮತ್ತು ಫೆಲೆಸ್ತೀನಿಗರ ಸಾರ್ವಭೌಮತೆಯ ಹಕ್ಕುಗಳನ್ನು ಗೌವಿಸುವುದಾಗಿದೆ.  ಅಮೆರಿಕಾದ ಈ ಪ್ರಯತ್ನವನ್ನು ಇಸ್ರೇಲನ್ನು ಈ ಪ್ರಾಂತ್ಯದ ‘ಪೊಲೀಸ್” ಆಗಿ ನೇಮಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಹಿಜಾಝಿ ಕಿಡಿ ಕಾರಿದ್ದಾರೆ.

- Advertisement -