ಬೆಳಗಾವಿ: 2019-20 ಹಾಗೂ 21ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಆಹ್ವಾನಿಸಿರುವ ಟೆಂಡರ್’ಗಳಲ್ಲಿ ನಡೆದಿರುವ 450 ಕೋಟಿ ರೂ. ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 2019-20 ಹಾಗೂ 2020-21ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿರುವ ಬಿಡ್ ದಾರರು ಅಕ್ರಮ ಹಾಗೂ ನಕಲಿ ದಾಖಲಾತಿಗಳನ್ನು ಸಲ್ಲಿಸಿ ನಿಯಮ ಉಲ್ಲಂಘಿಸಿ ಯಶಸ್ವಿ ಬಿಡ್ ದಾರರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಇಲಾಖೆಯ ಸುಮಾರು 450 ಕೋಟಿ ರೂ. ಅನುದಾನ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಆರೋಪದಲ್ಲಿ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಆದೇಶಿಸಿದ್ದರು. ಅದರಂತೆ ಸಿಐಡಿ ತನಿಖೆಗೆ ಆದೇಶಿಸಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಆದೇಶ ಹೊರಡಿಸಿದ್ದಾರೆ.