‘ಹಾಕಿ ವಿಶ್ವಕಪ್’ ಟ್ರೋಫಿ ಪ್ರದರ್ಶನ ಕಾರ್ಯಕ್ರಮ; ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಿಗೆ ಅವಮಾನ

Prasthutha|

ಚೆನ್ನೈ: ಪುರುಷರ ಹಾಕಿ ವಿಶ್ವಕಪ್ 2023 ಟೂರ್ನಿಯು ಒಡಿಶಾದ ಭುವನೇಶ್ವರದಲ್ಲಿ ಜನವರಿಯಲ್ಲಿ ನಡೆಯಲಿದೆ.  ಇದಕ್ಕೆ ಪೂರ್ವಭಾವಿಯಾಗಿ ಹಾಕಿ ಇಂಡಿಯಾ, ದೇಶದ ವಿವಿಧ ಭಾಗಗಳಲ್ಲಿ ಪ್ರತಿಷ್ಠಿತ ವಿಶ್ವಕಪ್ ಟ್ರೋಫಿ ಟೂರ್‌ ಆಯೋಜಿಸಿದ್ದು,  ಬುಧವಾರ ಚೆನ್ನೈ ತಲುಪಿದೆ.

- Advertisement -

ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಟ್ರೋಫಿ ಪ್ರದರ್ಶನ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಹಾಕಿ ದಂತಕಥೆಗಳಾದ ವಿ. ಭಾಸ್ಕರನ್, 1980ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮತ್ತು 1975ರ ವಿಶ್ವಕಪ್ ವಿಜೇತ ಬಿ.ಪಿ. ಗೋವಿಂದ, ಲೆಸ್ಲಿ ಫೆರ್ನಾಂಡಿಸ್, ವಿ ಜೆ ಫಿಲಿಪ್ಸ್ ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತಾದರೂ, ವೇದಿಕೆಯಲ್ಲಿ ಆಸನಗಳನ್ನು ನಿರಾಕರಿಸಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಮತ್ತು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಟ್ರೋಫಿಯನ್ನು ಸ್ವೀಕರಿಸಿ ಆ ಬಳಿಕ ಕೇರಳ ತಂಡಕ್ಕೆ ಹಸ್ತಾಂತರಿಸಿದರು. ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು, ಹಾಕಿ ಅಧಿಕಾರಿಗಳು ಹಾಗೂ ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ (ಎಸ್‌ಡಿಎಟಿ) ಅಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆ ಹಾರಿಸಿದ ಆಟಗಾರರನ್ನು ಕಡೆಗಣಿಸಲಾಗಿತ್ತು. 

- Advertisement -

ಈ ವೇಳೆ ʻಇದು ಹಾಕಿ ಕಾರ್ಯಕ್ರಮವೇ ಅಥವಾ ಏನು?ʼ ಎಂದು ಪ್ರಶ್ನಿಸುವ ಮೂಲಕ  ಭಾಸ್ಕರನ್ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದರು.  ಭಾರತಕ್ಕಾಗಿ ವಿಶ್ವಕಪ್‌ ಗೆದ್ದ ಆಟಗಾರರಿಗೆ ವೇದಿಕೆಯ ಮೊದಲ ಸಾಲಿನಲ್ಲಿ ಆಸನಗಳನ್ನು ಒದಗಿಸುವಂತೆ ಭಾಸ್ಕರನ್‌ ಒತ್ತಾಯಿಸಿದರು. ಈ ವಿಷಯವನ್ನು ರಾಜ್ಯ ಕ್ರೀಡಾ ಸಚಿವರ ಬಳಿ ತಿಳಿಸಿದ ಭಾಸ್ಕರನ್‌, ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವಮಾನ ಮಾಡಿದಂತಾಗಿದೆ ಎಂದು ಬೇಸರ ತೋಡಿಕೊಂಡರು. 1980ರಲ್ಲಿ ಮಾಸ್ಕೋ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗೆದ್ದಿದ್ದ ಭಾರತದ ಹಾಕಿ ತಂಡವನ್ನು ಭಾಸ್ಕರನ್‌ ಮುನ್ನಡೆಸಿದ್ದರು.

ʻವಿಶ್ವಕಪ್ ವಿಜೇತರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಸಂಘಟಕರು ಮರೆತಿದ್ದಾರೆ. ಇಂದಿನ ಬೆಳವಣಿಗೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ತಮಿಳುನಾಡಿನ ಎಂಟು ಕೋಟಿ ಜನಸಂಖ್ಯೆಯಲ್ಲಿ ನಾವು ಮೂವರು ಮಾತ್ರ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದೇವೆ. ನಾನು ಮೂರು ವಿಶ್ವಕಪ್ ಆಡಿದ್ದೇನೆ. ಆದರೂ ನನ್ನನ್ನು ಗುರುತಿಸಲಿಲ್ಲ, ಗೌರವಿಸಲಿಲ್ಲ ಎಂದು ವಿಜೆ ಫಿಲಿಪ್ಸ್ ತಮ್ಮ ಭಾಷಣದಲ್ಲಿ ಅಸಮಾಧಾನ ಹೊರಹಾಕಿದರು.

ʻಇದೇ ಮೈದಾನದಲ್ಲಿ ಬರಿಗಾಲಲ್ಲಿ ಹಾಕಿ ಆಡುವುದನ್ನು ಆರಂಭಿಸಿದ್ದೆ. ಎರಡು ಒಲಿಂಪಿಕ್ಸ್ ಮತ್ತು ಮೂರು ವಿಶ್ವಕಪ್‌ ಸೇರಿದಂತೆ  ಸುಮಾರು 12 ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದೇನೆ.  ನನ್ನ ರಾಜ್ಯದ ಜನರೇ  ನಮ್ಮನ್ನು ಗೌರವಿಸದಿದ್ದರೆ, ನಮಗೆ ಬೇರೆಲ್ಲಿ ಗೌರವ ಸಿಗುತ್ತದೆ ? ಇದು ತುಂಬಾ ದುಃಖಕರವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರೀಡಾ ಸಚಿವರು ನೋಡಿಕೊಳ್ಳಬೇಕು ಎಂದು ಫಿಲಿಫ್ಸ್‌ ಮನವಿ ಮಾಡಿದರು.

Join Whatsapp