ಹೊಸದಿಲ್ಲಿ: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ ಭಾರತವನ್ನು ಅಣಕಿಸಿ ಟ್ವೀಟ್ ಮಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಗೆ ಇರ್ಫಾನ್ ಪಠಾಣ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತ ಭಾರತ ತಂಡ ಟೂರ್ನಿಯಿಂದ ಹೊರಬಿದ್ದಿತ್ತು. ಭಾರತದ ಸೋಲಿನ ಬಳಿಕ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದರು.
ಆದರೆ ಪಾಕ್ ಪ್ರಧಾನಿಯ ಟ್ವೀಟ್‌ಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅದೇ ಧಾಟಿಯಲ್ಲಿ ಉತ್ತರವನ್ನು ನೀಡಿದ್ದಾರೆ. “ನಿಮ್ಮ ಮತ್ತು ನಮ್ಮ ನಡುವಿನ ದೊಡ್ಡ ವ್ಯತ್ಯಾಸವೇನೆಂದರೆ, ನಾವು ಇತರರ ಸೋಲಿನಲ್ಲಿ ಖುಷಿಪಡುವುದಿಲ್ಲ ಎಂಬುದಾಗಿದೆ” ಎಂದು ಪಠಾಣ್ ಹೇಳಿದ್ದಾರೆ.
“ಇದು ನಿಮಗೂ ನಮಗೂ ನಡುವೆ ಇರುವ ವ್ಯತ್ಯಾಸ. ನಾವು ನಾವಾಗಿಯೇ ಸಂತೋಷದಲ್ಲಿ ಇರುತ್ತೇವೆ. ಆದರೆ ನೀವು ಇನ್ನೊಬ್ಬರ ದುಖದಲ್ಲಿ ಖುಷಿಪಡುತ್ತೀರಿ. ನೀವು ನಿಮ್ಮ ದೇಶದ ಕ್ಷೇಮದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗದೇ ಇರಲು ಇದೇ ಕಾರಣವಾಗಿದೆ” ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.