October 26, 2020
IPL ಪಂದ್ಯದಲ್ಲಿ ಮಂಡಿಯೂರಿ ‘Black Lives Matter’ ಚಳವಳಿಗೆ ಬೆಂಬಲ ಸೂಚಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ : ಮುಂಬೈ ಇಂಡಿಯನ್ಸ್ ಆಟಗಾರ ಹಾರ್ದಿಕ್ ಪಾಂಡ್ಯ ‘Black Lives Matter’ ಚಳವಳಿಗೆ ಬೆಂಬಲ ಸೂಚಿವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಆ ಮೂಲಕ ಐಪಿಎಲ್ ಕೂಟದಲ್ಲಿ ಹೊಸ ಇತಿಹಾಸ ರಚಿಸಿದ್ದಾರೆ.
27 ವರ್ಷದ ಹಾರ್ದಿಕ್ ಪಾಂಡ್ಯ ಕೇವಲ 21 ಎಸೆತಗಳಲ್ಲಿ 60 ರನ್ ಗಳಿಸಿ ಮುಂಬೈ ಇಂಡಿಯನ್ಸ್ ಸವಾಲಿನ ಮೊತ್ತ ಪೇರಿಸಲು ಸಹಾಯ ಮಾಡಿದರು. 2 ಫೋರ್ ಮತ್ತು 6 ಸಿಕ್ಸರ್ ಗಳನ್ನು ಸಿಡಿಸಿದ ಅವರು, ಪಂದ್ಯದ ನಂತರ ತಮ್ಮ ಟ್ವಿಟರ್ ಖಾತೆಯಲ್ಲಿ ಮಂಡಿಯೂರಿ ಕುಳಿತ ಫೋಟೊ ಹಾಕಿ ‘Black Lives Matter’ ಎಂದು ಬರೆದುಕೊಂಡಿದ್ದಾರೆ.
ಜಗತ್ತಿನಾದ್ಯಂತ ನಡೆಯುತ್ತಿರುವ ಜನಾಂಗೀಯವಾದದ ವಿರುದ್ಧದ ಚಳವಳಿಗೆ ತಮ್ಮ ಬೆಂಬಲ ಸೂಚಿಸಿದ ಹಾರ್ದಿಕ್ ಪಾಂಡ್ಯಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅಮೆರಿಕದಲ್ಲಿ 2020ರ ಮೇ ತಿಂಗಳಿನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಜನಾಂಗದ ವ್ಯಕ್ತಿಯನ್ನು ಪೊಲೀಸ್ ಒಬ್ಬ ಕತ್ತಿನ ಮೇಲೆ ತುಳಿದು ಅಮಾನವೀಯವಾಗಿ ಹತ್ಯೆ ನಡೆಸಿದ್ದ ಘಟನೆ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ‘Black Lives Matter’ ಎಂಬ ಬೃಹತ್ ಹೋರಾಟ ನಡೆದಿತ್ತು. ಈ ವೇಳೆ ಮಿನ್ನೆಪೊಲಿಸ್ ಪೊಲೀಸರು ಮಂಡಿಯೂರಿ ಕ್ಷಮೆ ಯಾಚಿಸಿದ್ದರು. ಆ ಬಳಿಕ, ಹಲವು ಕ್ರೀಡಾ ತಾರೆಯರು ಮಂಡಿಯೂರುವ ಮೂಲಕ ಈ ಚಳವಳಿಗೆ ಬೆಂಬಲ ಸೂಚಿಸಿದ್ದರು.