ಭಾರತದ ಮೇಲೆ ಪರಿಣಾಮ ಬೀರಿರುವ ಇಂಡೋನೇಷ್ಯಾದ ತಾಳೆ ಎಣ್ಣೆ ಬಿಕ್ಕಟ್ಟು

Prasthutha|

ನವದೆಹಲಿ: ಜಗತ್ತಿನ ಅತಿ ದೊಡ್ಡ ತಾಳೆ ಎಣ್ಣೆ ಉತ್ಪಾದಕ ಮತ್ತು ರಫ್ತು ದೇಶವಾದ ಇಂಡೋನೇಷ್ಯಾದಲ್ಲಿ ದೇಶೀಯ ಕೊರತೆ ಕಂಡು ಬಂದಿರುವುದರಿಂದ ಬೆಲೆ ಹತೋಟಿ ಮತ್ತು ರಫ್ತು ಕಡಿತದ ಕ್ರಮ ಕೈಗೊಳ್ಳಲಾಗಿದೆ. ಇದು ಭಾರತದ ಮಾರುಕಟ್ಟೆಯ ಮೇಲೆ ಒತ್ತಡ ತಂದಿದೆ.

- Advertisement -

ಒಂದು ದೇಶ  ಅತಿ ಹೆಚ್ಚು ಉತ್ಪಾದಿಸುವ, ರಫ್ತು ಮಾಡುವ ವಸ್ತು ದೇಶದೊಳಗೇ ಕೊರತೆ ಎದುರಿಸುವಾಗ ರಫ್ತು ಕಡಿಮೆ ಮಾಡುವುದು ಸ್ವಾಭಾವಿಕ.

ವಿಶ್ವ ಸಂಸ್ಥೆಯ ಕೃಷಿ ಇಲಾಖೆಯು ಅಂದಾಜು ಮಾಡಿರುವಂತೆ 2021- 22ರಲ್ಲಿ ಇಂಡೋನೇಷ್ಯಾದಲ್ಲಿ 4.55 ಕೋಟಿ ಟನ್ ಪಾಮಾಯಿಲ್ ಉತ್ಪಾದನೆ ಆಗಿದೆ. ಇದು ಜಗತ್ತಿನ ಒಟ್ಟು ತಾಳೆ ಎಣ್ಣೆ ಉತ್ಪಾದನೆಯ 60% ಆಗಿದೆ. ಎರಡನೆಯ ಸ್ಥಾನದಲ್ಲಿರುವ ಮಲೇಷ್ಯಾದ ಉತ್ಪಾದನೆ  1.87 ಕೋಟಿ ಟನ್.

- Advertisement -

2.9 ಕೋಟಿ ಟನ್ ತಾಳೆ ಎಣ್ಣೆ ರಫ್ತು ಮಾಡುವ ಇಂಡೋನೇಷ್ಯಾ ಮೊದಲ ಸ್ಥಾನದಲ್ಲಿದ್ದರೆ ಎರಡನೆಯ ಸ್ಥಾನದಲ್ಲಿರುವ ಮಲೇಷ್ಯಾ 1.62 ಕೋಟಿ ಟನ್ ರಫ್ತು ಮಾಡುತ್ತದೆ.

ಮಾರ್ಚ್ 21 ಮತ್ತು ಮಾರ್ಚ್ 22ರ ನಡುವೆ ಒಂದು ಲೀಟರ್ ತಾಳೆ ಎಣ್ಣೆ ಆ ದೇಶದಲ್ಲಿ 14,000ದಿಂದ 22,000 ಇಂಡೋನೇಷ್ಯಾದ ರೂಪಾಯಿ ಇತ್ತು. ಇದೇ ಫೆಬ್ರವರಿ 1ರಂದು ಬೆಲೆ ನಿಯಂತ್ರಣ ಘೋಷಿಸಿದ ಸರಕಾರವು 14,000 ಇಂಡೋನೇಷ್ಯಾದ ರೂಪಾಯಿಗೇ ಮಾರಬೇಕು ಎಂದು ನಿಯಮ ಮಾಡಿತು. ಸೂಪರ್ ಮಾರ್ಕೆಟ್ ಗಳು ಸ್ವಲ್ಪ ರಿಯಾಯತಿಯಲ್ಲಿ ನೀಡುವುದರಿಂದ ಜನರು ಪಾಮಾಯಿಲ್ ಗೆ ಕ್ಯೂ ನಿಂತಿರುವುದು ನಾನಾ ಕಡೆ ಕಂಡುಬಂದಿತು.

ಇದರ ಜೊತೆಗೆ ರಫ್ತುದಾರರ ತಮ್ಮು ರಫ್ತಿನಲ್ಲಿ 20% ಎಣ್ಣೆಯನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬೇಕು ಎಂಬ ನಿಯಮವನ್ನು ಸಹ ಇಂಡೋನೇಷ್ಯಾ ಸರಕಾರ ಮಾಡಿದೆ. ಈ ಮೂಲಕ ಕಚ್ಚಾ ತಾಳೆ ಎಣ್ಣೆಯನ್ನು 9,300 ಮತ್ತು ರಿಫೈನ್ ಡನ್ನು 10,300 ಇಂ. ರೂಪಾಯಿಗೆ ಒದಗಿಸುವಂತೆಯೂ ನಿಯಮ ಮಾಡಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರ್ಚ್ ನಿಂದ 10% ಹೆಚ್ಚಿನ ಬೇಡಿಕೆ ಬಂದಿರುವುದು ಸಹ ವ್ಯವಹಾರವನ್ನು ಸ್ವಲ್ಪ ಏರುಪೇರು ಮಾಡಿದೆ.

ಪ್ರಾಕೃತಿಕ ಮತ್ತು ಮಾನವ ನಿರ್ಮಿತ ತಪ್ಪುಗಳೂ ಇದರಲ್ಲಿ ಇವೆ. ಇತರ ಅಡುಗೆ ಎಣ್ಣೆಗಳಾದ ಸೂರ್ಯಕಾಂತಿ ಮತ್ತು ಸೋಯಾಬೀನ್ ವಿತರಣೆಯಲ್ಲಿ ಆಗುವ ವ್ಯತ್ಯಯವು ಸಹ ತಾಳೆ ಎಣ್ಣೆ ಮೇಲೆ ಪರಿಣಾಮ ಬೀರುತ್ತದೆ.

ಯುದ್ಧದಲ್ಲಿ ಸೂರ್ಯಕಾಂತಿ

ಜಗತ್ತಿನ ಸೂರ್ಯಕಾಂತಿ ಎಣ್ಣೆ ಉತ್ಪಾದನೆಯಲ್ಲಿ 80% ರಷ್ಯಾ ಮತ್ತು ಉಕ್ರೇನಿನದು. ಇಂಡೋನೇಷ್ಯಾ ಮಲೇಷ್ಯಾದ 90% ಪಾಮೆಣ್ಣೆಯೊಂದಿಗೆ ಇದನ್ನು ಹೋಲಿಸಬಹುದು. ರಶಿಯಾ ಉಕ್ರೇನ್ ಯುದ್ಧ ನಡೆದಿರುವುದರಿಂದ ರಫ್ತುದಾರರು ಕಪ್ಪು ಸಮುದ್ರದಿಂದ ಹೋಗುವುದನ್ನು ನಿಲ್ಲಿಸಿದ್ದಾರೆ. ಅದರ ನಡುವೆ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ಹೇರಿರುವುದರಿಂದ ಅಲ್ಲಿಂದ ಸನ್ ಫ್ಲವರ್ ಆಯಿಲ್ ಹೊರ ಹೋಗುವುದು ತೀರಾ ಕಡಿಮೆಯಾಗಿದೆ.

ರಷ್ಯಾ 1.22 ಕೋಟಿ ಟನ್ ಅಡುಗೆ ಎಣ್ಣೆ ರಫ್ತು ಮಾಡುವ ಜಗತ್ತಿನ ಮೂರನೆಯ ಅತಿ ಹೆಚ್ಚು ಅಡುಗೆ ಎಣ್ಣೆ ರಫ್ತುದಾರ ದೇಶವೆನಿಸಿದೆ. ಸೋಯಾಬೀನ್ ಎಣ್ಣೆ ಸಹ ಇಲ್ಲಿಂದ ರಫ್ತಾಗುತ್ತದೆ.

ಬ್ರೆಜಿಲ್, ಅರ್ಜೆಂಟೀನಾ, ಪರುಗ್ವೆ ಎಂದು ಹೆಚ್ಚಿನ ಸೋಯಾ ಬೀನ್ ಎಣ್ಣೆ ತೆಂಕಣ ಅಮೆರಿಕದ ದೇಶಗಳಿಂದ ರಫ್ತಾಗುತ್ತದೆ. 2020- 21ರಲ್ಲಿ ಕಳೆದ ಆರು ವರುಷಗಳಲ್ಲೇ ಕಡಿಮೆ ಅಂದರೆ 9.4% ಸೋಯಾ ಎಣ್ಣೆ ಕಡಿಮೆ ಉತ್ಪಾದನೆಯಾಗಿದೆ. ಹೀಗೆ ಸೋಯಾ, ಸೂರ್ಯಕಾಂತಿ ಎಣ್ಣೆಗಳ ಕೊರತೆ ಸಹ ಪಾಮಾಯಿಲ್ ಬಿಕ್ಕಟ್ಟನ್ನು ಹೆಚ್ಚಿಸಿದೆ.  

ಇನ್ನೊಂದು ಪೆಟ್ರೋಲಿಯಂ ಬಿಕ್ಕಟ್ಟು. ತಾಳೆಎಣ್ಣೆಯನ್ನು ಜೈವಿಕ ಇಲ್ಲವೇ ಬದಲಿ ಇಂಧನವಾಗಿ ಬಳಸುತ್ತಾರೆ. ಇಂಡೋನೇಷ್ಯಾ ಸರಕಾರವು 2020ರಿಂದ ಪಾಮೆಣ್ಣೆಯಿಂದ 30% ಡೀಸೆಲ್ ತಯಾರಿಸುವುದನ್ನು ಕಡ್ಡಾಯ ಮಾಡಿದೆ. ಆ ಮೂಲಕ ಪೆಟ್ರೋಲಿಯಂ ಆಮದು ಕಡಿಮೆ ಮಾಡಿದೆ. ದೇಶದ 1.71 ಕೋಟಿ ಟನ್ ದೇಶೀಯ ಪಾಮಾಯಿಲ್ ಬಳಕೆಯಲ್ಲಿ 75 ಲಕ್ಷ ಟನ್ ಡೀಸೆಲ್ ಗೆ ಬಳಕೆಯಾಗುತ್ತದೆ. ಉಳಿದದ್ದು 96 ಲಕ್ಷ ಟನ್  ಅಡುಗೆಗೆ.

ಭಾರತದ ಮೇಲೆ ಪರಿಣಾಮ

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಸಸ್ಯ ಎಣ್ಣೆ ಆಮದು ಮಾಡಿಕೊಳ್ಳುವ ದೇಶವಾಗಿದೆ. ಅದರ ವಾರ್ಷಿಕ ಆಮದು 1.42 ಕೋಟಿ ಟನ್ ಗಳು. ಅದರಲ್ಲಿ ಅತಿ ಹೆಚ್ಚು ಎಂದರೆ 90 ಲಕ್ಷ ಟನ್ ನಷ್ಟು ಪಾಮಾಯಿಲ್ ಆಗಿದೆ. ಭಾರತಕ್ಕೆ ಅತಿ ಹೆಚ್ಚು ತಾಳೆ ಎಣ್ಣೆ ಪೂರೈಸುವ ಇಂಡೋನೇಷ್ಯಾದ ಜಾಗವನ್ನು 2021- 22ರಲ್ಲಿ ಮಲೇಷ್ಯಾ ಹಿಡಿದಿದೆ.

ಇಂಡೋನೇಷ್ಯಾದಲ್ಲಿನ ತುರ್ತು ಭಾರತದಲ್ಲಿ ಅಡುಗೆ ಎಣ್ಣೆ ಕೊರತೆಯನ್ನು ಸ್ವಲ್ಪ ಮಟ್ಟಿಗೆ ಉಂಟು ಮಾಡಿದೆ. ಆದರೆ ಇಲ್ಲಿಯವರೆಗೆ ಅದು ತೀವ್ರವಾಗಿ ಬಾಧಿಸಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ ತೊಂದರೆ ಇದೆ.

Join Whatsapp