ಕೋವಿಡ್ ನಿಯಮ ಉಲ್ಲಂಘನೆ | ಬಹ್ರೈನ್ ನಲ್ಲಿ ಭಾರತೀಯನಿಗೆ ಮೂರು ವರ್ಷ ಜೈಲು ಶಿಕ್ಷೆ!

Prasthutha|

ಹೊಸದಿಲ್ಲಿ : ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಹ್ರೈನ್ ನಲ್ಲಿ ಭಾರತೀಯನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲಾಗಿದೆ.

- Advertisement -

ಜೈಲು ಶಿಕ್ಷೆ ಅನುಭವಿಸುತ್ತಿರುವ ಯುವಕನನ್ನು ಬಿಹಾರ ಮೂಲದ ಮೊಹಮ್ಮದ್ ಖಾಲಿದ್ ಎಂದು ಗುರುತಿಸಲಾಗಿದೆ. ಯುವಕನ ಬಿಡುಗಡೆ ಕೋರಿ ಕುಟುಂಬದ ಸದಸ್ಯರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿದೆ.

ಮೊಹಮ್ಮದ್ ಖಾಲಿದ್ ಗೆ ಕಾನೂನುಬಾಹಿರವಾಗಿ ಶಿಕ್ಷೆ ನೀಡಲಾಗಿದೆ ಎಂದು ಕುಟುಂಬವು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್ ಅವರ ಬಳಿ ಅವಲತ್ತುಕೊಂಡಿದೆ.

- Advertisement -

ಮೊಹಮ್ಮದ್ ಖಾಲಿದ್ ಕಳೆದ ಎಂಟು ವರ್ಷಗಳಿಂದ ಬಹ್ರೈನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 18ರಂದು ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹದಿನೈದು ದಿನಗಳ ಕಾಲ ಕ್ವಾರಂಟೈನ್ ನಲ್ಲಿರಲು ಖಾಲಿದ್ ಗೆ ಆದೇಶಿಸಲಾಗಿತ್ತು. ಖಾಲಿದ್ ಕೆಲಸ ಮಾಡುತ್ತಿರುವ ಕಂಪೆನಿಯ ವ್ಯವಸ್ಥೆಯಡಿ ಕ್ವಾರಂಟೈನ್ ನಲ್ಲಿ 17 ದಿನಗಳು ಕಳೆದ ಖಾಲಿದ್, ಆಹಾರವನ್ನು ಖರೀದಿಸಲು ಹೊರಗಡೆ ಬಂದಾಗ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಎಂದು ಬಂಧಿಸಲಾಗಿದೆ ಎಂದು ಕುಟುಂಬ ಸಚಿವಾಲಯಕ್ಕೆ ನೀಡಿದ ಮನವಿಯಲ್ಲಿ ತಿಳಿಸಿದೆ.

ಮೊಹಮ್ಮದ್ ಖಾಲಿದ್ ರಸ್ತೆಯಲ್ಲಿ ನಿಂತಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಕೋವಿಡ್ ನಿಯಮ ಉಲ್ಲಂಘನೆಯಾಗಿದೆ ಎಂದು ಪ್ರಚಾರ ಮಾಡಿದ್ದರು. ನಂತರ ಬಹ್ರೈನ್ ಪೊಲೀಸರು ಖಾಲಿದ್ ನನ್ನು ಬಂಧಿಸಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Join Whatsapp