ಬಹುಕೋಟಿ ಐಎಂಎ ಹಗರಣ: ಸಕ್ಷಮ ಪ್ರಾಧಿಕಾರಕ್ಕೆ ಅಧಿಕಾರಿಗಳ ನೇಮಕ; ವರದಿ ಸಲ್ಲಿಸಲು ಕಾಲಾವಕಾಶ ಕೋರಿದ ಇ ಡಿ ವಕೀಲರು

Prasthutha|

ಬೆಂಗಳೂರು: ಬಹುಕೋಟಿ ಐಎಂಎ ಸಮೂಹ ಸಂಸ್ಥೆಗಳ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಕ್ಷಮ ಪ್ರಾಧಿಕಾರ ರಚಿಸಿದ್ದು, ಅಲ್ಲಿನ ಎರಡು ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಆದರೆ, ಸಹಾಯಕ ಆಯುಕ್ತ ಮತ್ತು ವಿಶೇಷ ಅಧಿಕಾರಿ ಹುದ್ದೆಗೆ ವರ್ಗಾಯಿಸಿರುವ ಕೆಎಎಸ್ ಅಧಿಕಾರಿ ಅಬಿದ್ ಗಡ್ಯಾಳ್ ಅವರು ಅಲ್ಲಿ ವರದಿ ಮಾಡಿಕೊಂಡಿಲ್ಲ. ಹೀಗಾಗಿ, ಅವರ ವಿರುದ್ಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇಲಾಖಾ ತನಿಖೆಗೆ ಆದೇಶಿಸಿದೆ. ಸಕ್ಷಮ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ಆರ್ ಶಿಲ್ಪಾ ಅವರನ್ನು ಸೆಪ್ಟೆಂಬರ್ 15ರಂದು ನೇಮಕ ಮಾಡಿರುವುದಾಗಿ ಕರ್ನಾಟಕ ಹೈಕೋರ್ಟ್ಗೆ ಗುರುವಾರ ರಾಜ್ಯ ಸರ್ಕಾರವು ಮೆಮೊ ಸಲ್ಲಿಸಿದೆ.

- Advertisement -

ಅರ್ಜಿದಾರ ಇಮ್ರಾನ್ ಪಾಷಾ ಮತ್ತು ನಾಜಿಯಾ ಬಾನು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ಹಾಗೂ ಸಂಬಂಧಿತ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಜಾರಿ ನಿರ್ದೇಶನಾಲಯದ ನಿರ್ದೇಶಕರ ಪರವಾಗಿ ಹಾಜರಿದ್ದ ವಕೀಲರು “ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಶಿವಾಜಿನಗರ ಶಾಸಕ ಆರ್ ರೋಷನ್ ಬೇಗ್ ಅವರ ವಿಚಾರಣೆಯೂ ಸೇರಿದಂತೆ ಒಟ್ಟಾರೆ ಇದುವರೆಗೆ ನಡೆಸಲಾಗಿರುವ ತನಿಖೆಗೆ ಸಂಬಂಧಿಸಿದಂತೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಸೂಚಿಸಿತ್ತು. ವರದಿ ಸಿದ್ಧವಾಗಿದೆ. ಕಾರಣಾಂತರಗಳಿಂದ ವರದಿ ಸಲ್ಲಿಸಲು ಆಗಿಲ್ಲ. ಇಂದು ಸಂಜೆಯ ಒಳಗೆ ರಿಜಿಸ್ಟ್ರಿಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗುವುದು. ಈ ವರದಿಯನ್ನು ಯಾರೊಂದಿಗೂ ಹಂಚಿಕೊಳ್ಳಲಾಗದು” ಎಂದು ತಿಳಿಸಿದರು.

- Advertisement -

ರಾಜ್ಯ ಸರ್ಕಾರದ ಪರ ವಕೀಲರು “ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಮನವಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಅವುಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಕ್ಕೆ ಕಾಲಾವಕಾಶ ಬೇಕಿದೆ. ಈಗಷ್ಟೇ ವಿಶೇಷ ನ್ಯಾಯಾಲಯವು ಸುಸಜ್ಜಿತವಾಗಿ ಪ್ರಕರಣವನ್ನು ಆಲಿಸಲು ಆರಂಭಿಸಿದೆ. ಈ ನಿಟ್ಟಿನಲ್ಲಿ ಸದರಿ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.ಇದಕ್ಕೆ ಒಪ್ಪಿದ ಪೀಠವು “ರಾಜ್ಯ ಸರ್ಕಾರದ ವಕೀಲರು ವಸ್ತುಸ್ಥಿತಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ವಿಶೇಷ ನ್ಯಾಯಾಲಯವು ಕಾರ್ಯಾರಂಭ ಮಾಡಿದ್ದು, ಈ ನ್ಯಾಯಾಲಯವು ತುರ್ತಾಗಿ ಪ್ರಕರಣಗಳ ವಿಚಾರಣೆ ನಡೆಸುವಂತೆ ವಿಶೇಷ ನ್ಯಾಯಾಲಯಕ್ಕೆ ಈಗಾಗಲೇ ಆದೇಶಿಸಿದೆ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 22ಕ್ಕೆ ಮುಂದೂಡಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.

ಐಎಂಎ ಕಂಪೆನಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಾಜಿನಗರದ ಶಾಸಕ ಆರ್ ರೋಶನ್ ಬೇಗ್ ಅವರ ವಿರುದ್ದ ಕಾನೂನುಬಾಹಿರ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್ಎ) ಅಡಿ ಕೈಗೊಂಡಿರುವ ಕ್ರಮದ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಕಳೆದ ತಿಂಗಳು ಪೀಠ ಆದೇಶ ಮಾಡಿತ್ತು.

ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಅವರು “ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಐಡಿ ಕಾಯಿದೆ ಅಡಿ ಬೇಗ್ ಅವರ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಮಧ್ಯೆ, ರೋಶನ್ ಬೇಗ್ ನಿವಾಸದ ಮೇಲೆ ಈಚೆಗೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಈ ಕುರಿತು ವರದಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ವಶಕ್ಕೆ ಪಡೆಯಲಾದ ಆಸ್ತಿಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕಾಗಿ ಸಕ್ಷಮ ಪ್ರಾಧಿಕಾರವು ಅರ್ಜಿ ಸಲ್ಲಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಆಗ ಪೀಠವು “ಕೆಪಿಐಡಿ ಕಾಯಿದೆ ಪ್ರಕಾರ ಅರ್ಜಿ ವಿಲೇವಾರಿ ಮಾಡಲು ಆದ್ಯತೆ ನೀಡುವಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆದೇಶಿಸಿದ್ದು, ಆಸ್ತಿಗಳ ಸಂಬಂಧ ನಿರ್ಧಾರ ಕೈಗೊಂಡರೆ ಅವುಗಳನ್ನು ಮಾರಾಟ ಮಾಡಿ ಐಎಂಎದಲ್ಲಿ ಹೂಡಿಕೆ ಮಾಡಿರುವವರಿಗೆ ಹಣ ಮರಳಿಸಬಹುದು. ಇದಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಬಹುಮುಖ್ಯವಾಗುತ್ತದೆ. ಈ ಸಂಬಂಧ ರಿಜಿಸ್ಟ್ರಾರ್ ಜನರಲ್ ಒಂದು ತಿಂಗಳ ಒಳಗೆ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶ ಮಾಡಿತ್ತು.

ಸಕ್ಷಮ ಪ್ರಾಧಿಕಾರವು ಕೆಪಿಐಡಿ ಕಾಯಿದೆ ಅಡಿ ವಕೀಲರನ್ನು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಸೂಚನೆಯ ಅನುಸಾರ ಸಕ್ಷಮ ಪ್ರಾಧಿಕಾರ ನಡೆದುಕೊಂಡರೆ ಕಾನೂನಿನ ಆಶಯವೇ ವಿಫಲವಾಗುತ್ತದೆ ಎಂದು ಪೀಠ ಹೇಳಿತ್ತು.

ಇದರ ಜೊತೆಗೆ ರಾಜಕಾರಣಿಯ ಆಸ್ತಿಗಳನ್ನು ವಶಕ್ಕೆ ಪಡೆದು ಅದನ್ನು ಮಾರಾಟ ಮಾಡುವ ಮೂಲಕ ಸಾಮಾನ್ಯ ಜನರ ಹಣ ವಾಪಸ್ ಮಾಡುವ ವಿಚಾರದಲ್ಲಿ ಸಕ್ಷಮ ಪ್ರಾಧಿಕಾರದ ನಿಲುವಿಗೆ ವಿರುದ್ಧವಾದ ನಿಲುವು ಕೈಗೊಳ್ಳುವ ಮೂಲಕ ದ್ವಂದ್ವ ನಿಲುವನ್ನು ರಾಜ್ಯ ಸರ್ಕಾರ ತಳೆದಿದೆ ಎಂದು ಪೀಠ ಹೇಳಿತ್ತು.

ಇನ್ನು ಸಕ್ಷಮ ಪ್ರಾಧಿಕಾರದಲ್ಲಿ ಖಾಲಿ ಇರುವ ಎರಡು ಹುದ್ದೆಗಳಿಗೆ ಇಬ್ಬರು ಕೆಎಎಸ್ ಅಧಿಕಾರಿಗಳನ್ನು ಒಂದು ತಿಂಗಳಲ್ಲಿ ನೇಮಿಸಬೇಕು ಎಂದು ಪೀಠ ಹೇಳಿತ್ತು. ಆಗ, ಸರ್ಕಾರವು ಒಬ್ಬರು ಅಧಿಕಾರಿಯನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಆದರೆ, ಅವರು ಅಲ್ಲಿಗೆ ವರದಿ ಮಾಡಿಕೊಳ್ಳುತ್ತಿಲ್ಲ ಎಂದಿತು. ಆಗ ಪೀಠವು “ಅಧಿಕಾರಿಯು ರಾಜ್ಯ ಸರ್ಕಾರ ಸೂಚಿಸಿದ ಸ್ಥಳಕ್ಕೆ ವರದಿ ಮಾಡಿಕೊಳ್ಳದಿದ್ದರೆ ಕ್ರಮಕೈಗೊಳ್ಳುವ ಅಧಿಕಾರವನ್ನು ಸರ್ಕಾರ ಹೊಂದಿದೆ. ಅಸಹಾಯಕತೆ ವ್ಯಕ್ತಪಡಿಸುವ ಅಗತ್ಯವಿಲ್ಲ” ಎಂದು ಸರ್ಕಾರಕ್ಕೆ ಆದೇಶಿಸಿತ್ತು.
(ಕೃಪೆ: ಬಾರ್ & ಬೆಂಚ್)



Join Whatsapp