ʻಸಮಾಜಘಾತುಕ ಶೂದ್ರ ಶಕ್ತಿʼ ಎಂದ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್

Prasthutha|

ಮೈಸೂರು: ಶೂದ್ರರನ್ನು ಸಮಾಜಘಾತುಕರೆಂದು ಅವಮಾನಿಸಿದ್ದು, ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ಕೊಡದೆ ʻಸಮಾಜಘಾತುಕ ಶೂದ್ರ ಶಕ್ತಿʼಗಳನ್ನು ನಿಯಂತ್ರಿಸಬೇಕೆಂದು ಮಂಗಳಾ ಸೋಮಶೇಖರ್ ಮನವಿ ಸಲ್ಲಿಸಿದ್ದಾರೆ.

ಮಂಗಳಾ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರಗತಿಪರ ಚಿಂತಕರಾದ ಪ್ರೊ.ಬಿ.ಪಿ.ಮಹೇಶ್‌ಚಂದ್ರ ಗುರು ಸೇರಿದಂತೆ ಹಲವರು ಖಂಡನೆ ವ್ಯಕ್ತಪಡಿಸಿದ್ದಾರೆ.

- Advertisement -

ಹೇಳಿಕೆಯು ವಿವಾದಕ್ಕೆ ತಿರುಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಜೆಪಿ ಜಿಲ್ಲಾಧ್ಯಕ್ಷೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿದ ಅವರು ʻಸಮಾಜಘಾತುಕ ಕ್ಷುದ್ರ ಶಕ್ತಿʼಗಳು ಎಂಬ ಪದದ ಬದಲು ಕಣ್ತಪ್ಪಿನಿಂದ ʻಸಮಾಜಘಾತುಕ ಶೂದ್ರ ಶಕ್ತಿʼಗಳು ಎಂದಾಗಿದೆ. ಇದರಲ್ಲಿ ಯಾವುದೇ ಸಮುದಾಯಕ್ಕೆ ನೋಯಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷೆಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಗತಿಪರ ಚಿಂತಕರಾದ ಪ್ರೊ.ಬಿ.ಪಿ.ಮಹೇಶ್‌ಚಂದ್ರ ಗುರು, “ಸಮಾಜಘಾತುಕ ಕ್ಷುದ್ರಶಕ್ತಿಗಳು ಯಾವುದೇ ನೆಪದಲ್ಲಾದರೂ ಮಹಿಷ ದಸರಾ ಆಚರಿಸದಂತೆ ಆಜ್ಞಾಪೂರ್ವಕವಾಗಿ ಮುಂಜಾಗ್ರತೆಯ ಕ್ರಮ ಕೈಗೊಳ್ಳಬೇಕುʼ ಎಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದೆ. ವಾಸ್ತವವಾಗಿ ಇವರೇ ಭಾರತದ ಅಸಲಿ ಸಮಾಜಘಾತುಕ ಕ್ಷುದ್ರಶಕ್ತಿಗಳೇ ಹೊರತು ಮಹಿಷ ದಸರಾ ಆಚರಿಸುವ ನಾಡಿನ ಮೂಲನಿವಾಸಿಗಳಲ್ಲ. ಮೈಸೂರಿನ ತಾಲಿಬಾನಿ ಸಿಂಹನ ಸಹ ನಟಿ-ನಟರ ಇಂತಹ ಕುಚೋದ್ಯಗಳಿಗೆ ಪ್ರಗತಿಪರರು ಯಾವುದೇ ಮಹತ್ವ ನೀಡುವುದಿಲ್ಲ” ಎಂದಿದ್ದಾರೆ.

ಯುವ ಲೇಖಕ ಹಾರೋಹಳ್ಳಿ ರವೀಂದ್ರ ಅವರು,  ʻಮಂಗಳ ಸೋಮಶೇಖರ್ ಅವರು ಶೂದ್ರರನ್ನು ಸಮಾಜ ಘಾತುಕ ಶಕ್ತಿಗಳು ಅಂತ ಕರೆದು ಈ ದೇಶದ ಓಬಿಸಿ, ಎಸ್‌ಸಿ, ಎಸ್‌ಟಿ ಗಳನ್ನು ಅವಮಾನಿಸಿದ್ದಾರೆ. ಇದು ಸಾರ್ವಜನಿಕ ಚರ್ಚೆಗೆ ಬಿದ್ದ ಮೇಲೆ ನಾನು ‘ಕ್ಷುದ್ರ ಶಕ್ತಿ’ ಎಂದು ಹೇಳಿದೆ ಮುದ್ರಣ ದೋಷವಾಗಿದೆ ಎಂದು ಹೇಳಿದ್ದಾರೆ. ಕ್ಷುದ್ರ ಶಕ್ತಿ ಎಂದರೆ ಕೆಟ್ಟ ಜನರು ಎಂದರ್ಥ. ಹಾಗಾದರೆ ಇವರ ದೃಷ್ಟಿಯಲ್ಲಿ ಮಹಿಷಾ ದಸರಾ ಆಚರಿಸುವ ಈ ನೆಲದ ಶೇ.90 ರಷ್ಟು ಜನಸಂಖ್ಯೆ ಇರುವ ಓಬಿಸಿ, ಎಸ್‌ಸಿ ಮತ್ತು ಎಸ್‌ಟಿ ಜನರು ಕೆಟ್ಟ ಜನರೆ. ಈ ಹೇಳಿಕೆಯೂ ಕೂಡ ಜನಾಂಗಿಯ ನಿಂದನೆಯ ಒಂದು ಭಾಗವೇ ಆಗಿದೆ. ಜನಪ್ರತಿನಿಧಿಗಳಾದ ಇವರು ಸಂವಿಧಾನದ ಚೌಕಟ್ಟಿನಲ್ಲಿ ಯೋಚಿಸಬೇಕು. ದಸರಾ ಆಚರಣೆ ಮಾಡುವವರಿಗೆ ಒಂದು ನಂಬಿಕೆ ಇದೆ. ಹಾಗೆಯೆ ಮಹಿಷಾ ದಸರಾ ಆಚರಿಸುವವರಿಗೂ ಒಂದು ನಂಬಿಕೆ ಇದೆ ಎಂಬುದನ್ನು ಕೂಡ ಗಮನದಲ್ಲಿರಿಸಿಕೊಳ್ಳಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -