ಬೆಂಗಳೂರು: PSI ನೇಮಕಾತಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಎನ್ನಲಾದ ಬಿಜೆಪಿ ಮುಖಂಡರಾದ ದಿವ್ಯಾ ಹಾಗರಗಿಯನ್ನು ಇದುವರೆಗೂ ಬಂಧಿಸಿಲ್ಲ. ತಪ್ಪು ಮಾಡಿದ ದೊಡ್ಡವರನ್ನು ಬಿಟ್ಟು ಸಣ್ಣಪುಟ್ಟವರನ್ನು ಹಿಡಿಯುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಮಾಡಲಾದ ಧರಣಿಯ ಕಡೆಯ ದಿನ ಮಾಜಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹಾಗೂ ನಾನು ಪತ್ರಿಕಾಗೋಷ್ಠಿ ನಡೆಸಿ ಪಿಎಸ್ ಐ ನೇಮಕದಲ್ಲಿ ಅಕ್ರಮ ನಡೆದಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದೆವು. ಪಿಎಸ್ ಐ ನೇಮಕಾತಿ ಅಕ್ರಮವು ಮೂರು ಹಂತಗಳಲ್ಲಿ ನಡೆದಿದ್ದು, ಮೊದಲು ಪ್ರಶ್ನೆ ಪತ್ರಿಕೆ ಕೊಡುವಾಗ ವ್ಯವಸ್ಥಿತವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಟ್ಟು ಗೊತ್ತಿರುವುದು ಬರೆದು ಉಳಿದಿದ್ದನ್ನು ಖಾಲಿ ಬಿಡಿ ಎಂದು ಹೇಳಿರುತ್ತಾರೆ. ಎರಡನೇ ಹಂತದಲ್ಲಿ ತಮಗೆ ಬೇಕಾದವರಿಗೆ ಪ್ರಶ್ನೆ ಪತ್ರಿಕೆಯಲ್ಲಿ ಖಾಲಿ ಇರುವ ಪ್ರಶ್ನೆಗಳಿಗೆ ಇವರೇ ಉತ್ತರ ತುಂಬುತ್ತಾರೆ. ಮೂರನೆ ಹಂತದಲ್ಲಿ ಮೌಲ್ಯಮಾಪನ ಮಾಡುವಾಗ ಹೆಚ್ಚು ಅಂಕ ನೀಡಲಾಗಿರುತ್ತದೆ ಎಂದು ಅವರು ಹೇಳಿದರು.
ಈ ಕರ್ಮಕಾಂಡವನ್ನು ಕೇವಲ ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ಅಕ್ರಮ ನಡೆದ ಪರಿಕ್ಷಾ ಕೇಂದ್ರ ಕಲಬುರ್ಗಿ ಬಿಜೆಪಿ ಮಹಿಳಾ ಅಧ್ಯಕ್ಷರಾಗಿದ್ದ ದಿವ್ಯಾ ಹಾಗರಗಿ ಅವರಿಗೆ ಸೇರಿದ್ದು, ಬಿಜೆಪಿಯ ಎಲ್ಲ ಮುಖಂಡರಿಗೆ ಸಂಪರ್ಕ ಹೊಂದಿದ್ದು, ಗೃಹ ಮಂತ್ರಿಗಳು ಕೂಡ ಅವರ ಮನೆಗೆ ಹೋಗಿದ್ದರು. ದಿವ್ಯಾ ಹಾಗರಗಿ, ಮಧ್ಯವರ್ತಿಗಳು, ಇಲಾಖೆ ಕೆಲವು ಅಧಿಕಾರಿಗಳು ಸೇರಿಕೊಂಡು ಈ ಅಕ್ರಮ ನಡೆಸಿದ್ದು, ಇದುವರೆಗೂ ಈ ಆರೋಪಿಗಳ ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಾಗಿಲ್ಲ. ನೇಮಕಾತಿ ಜವಾಬ್ದಾರಿ ಹೊತ್ತಿರುವ ಎಡಿಜಿಪಿ ಅಧಿಕಾರಿಗಳನ್ನು ಅದೇ ಸ್ಥಾನದಲ್ಲಿ ಮುಂದುವರಿಸಿದ್ದು, ಇದರಿಂದ ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಸಾಕ್ಷಿ ನಾಶಕ್ಕೆ ಅವರನ್ನು ಸರ್ಕಾರ ಅದೇ ಹುದ್ದೆಯಲ್ಲಿ ಮುಂದುವರಿಸಿದೆ ಎಂದು ಅವರು ಆರೋಪಿಸಿದರು.
ಇಷ್ಟೆಲ್ಲಾ ಅಕ್ರಮವಾದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳನ್ನು ಅಮಾನತು ಮಾಡದಿದ್ದರೂ, ವರ್ಗಾವಣೆಯಾದರೂ ಮಾಡಿ ಪಾರದರ್ಶಕ ತನಿಖೆ ನಡೆಸಬಹುದಾಗಿತ್ತು. ಆದರೆ ಸರ್ಕಾರ ಈ ಹಗರಣವನ್ನು ಮುಚ್ಚಿಹಾಕಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ. ಈ ಕರ್ಮಕಾಂಡದಲ್ಲಿ ಬಿಜೆಪಿ ಪ್ರಭಾವಿ ನಾಯಕರು ಶಾಮೀಲಾಗಿದ್ದು, ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಎಲ್ಲ ಪ್ರಭಾವಿಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಈ ಹಗರಣದಲ್ಲಿ ಗೃಹಮಂತ್ರಿಗಳ ಪಾತ್ರ ಇದೆಯೋ ಇಲ್ಲವೋ. ಆದರೆ ಅವರ ಪಾತ್ರ ಇದೆ ಎಂಬ ಶಂಕೆ ಮಾತ್ರ ವ್ಯಕ್ತವಾಗುತ್ತಿದೆ. ಕಾರಣ, ಈ ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಿದ್ದು ಯಾರು? ಈ ವಿಚಾರವಾಗಿ ಸಂಸತ್ ಸದಸ್ಯರು ಪತ್ರ ಬರೆದಿದ್ದಾಗಿ ಹೇಳುತ್ತಾರೆ. ಆದರೆ ಆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇನ್ನು ಗೃಹ ಮಂತ್ರಿಗಳು ಆರೋಪಿ ಮನೆಗೂ ಹೋಗಿದ್ದು, ಗೃಹಮಂತ್ರಿಗಳು ಈ ಎಲ್ಲ ಶಂಕೆಗಳನ್ನು ನಿವಾರಿಸಬೇಕು ಎಂದು ರಾಮಲಿಂಗಾ ರೆಡ್ಡಿ ಆಗ್ರಹಿಸಿದರು.
ದಿವ್ಯಾ ಹಾಗರಗಿ ಅವರನ್ನು ಇದುವರೆಗೂ ಬಂಧಿಸಲಾಗಿಲ್ಲ, ಅವರನ್ನು ಹಿಡಿಯುತ್ತೇವೆ ಎಂದು ಹೇಳಲಾಗುತ್ತಿದೆಯಾದರೂ ಅದು ಸಾಧ್ಯವಾಗಿಲ್ಲ. ಇನ್ನು ಪ್ರಕರಣದಲ್ಲಿ ಯಾರೆಲ್ಲ ತಪ್ಪು ಮಾಡಿದ್ದಾರೋ ಅವರನ್ನು ಹಿಡಿದು ಬಂಧಿಸಬೇಕು. ಆದರೆ ಸಣ್ಣ ಮೀನುಗಳನ್ನು ಹಿಡಿದು, ದೊಡ್ಡ ತಿಮಿಂಗಲಗಳ ರಕ್ಷಣೆ ಆಗಬಾರದು. ಸಣ್ಣವರನ್ನು ಬಂಧಿಸಿ ಈ ಪ್ರಕರಣವನ್ನು ಕ್ರಮೇಣ ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಟೀಕಿಸಿದರು.
ದಿವ್ಯಾ ಹಾಗರಗಿ ಅವರು ತಲೆಮರೆಸಿಕೊಂಡು ಇಷ್ಟು ದಿನಗಳಾದರೂ ಬಂಧಿಸಲು ಸಾಧ್ಯವಾಗಲಿಲ್ಲ ಎಂದರೆ ಸರ್ಕಾರವೇ ಅವರಿಗೆ ಬೆಂಬಲ ನೀಡುತ್ತಿದೆ. ಗೃಹಮಂತ್ರಿಗಳೇ ಅವರ ಮನೆಗೆ ಹೋಗಿರುವಾಗ ಪೊಲೀಸ್ ಅಧಿಕಾರಿಗಳು ಹೇಗೆ ಅವರನ್ನು ಬಂಧಿಸುತ್ತಾರೆ? ಆಕೆ ಬಿಜೆಪಿ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು, ದಿಶಾ ಸಮಿತಿ ಹಾಗೂ ಕೌನ್ಸಿಲ್ ಕಮಿಟಿ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ. ಇವರನ್ನೇ ಹಿಡಿಯಾಗದಿದ್ದರೆ, ಪೊಲೀಸರು ದೊಡ್ಡ ಕ್ರಿಮಿನಲ್ ಗಳನ್ನು ಬಂಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು. ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದು, ಅವರಿಗೆ ಜಾಮೀನು ನೀಡುವುದು ಬಿಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಸರ್ಕಾರ ತಮ್ಮ ಪಕ್ಷದವರ ರಕ್ಷಣೆಗೆ ನಿಂತಿದ್ದಾರೆ. ಈ ಮಧ್ಯೆ ಸಿಐಡಿ ಅಧಿಕಾರಿಗಳು ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಜಾರಿ ಮಾಡಿದೆ. ಪ್ರಿಯಾಂಕ್ ಖರ್ಗೆ ಅವರು ಈ ಅಕ್ರಮ ಬಯಲು ಮಾಡಿದ್ದು, ಸಾರ್ವಜನಿಕವಾಗಿ ಲಭ್ಯವಿರುವ ಸರ್ಕಾರದ ದಾಖಲೆಗಳನ್ನೇ ಇಟ್ಟುಕೊಂಡು ಈ ಕ್ರಮ ಬಹಿರಂಗಪಡಿಸಿದ್ದು, ಈ ದಾಖಲೆಗಳು ಸರ್ಕಾರದ ಬಳಿ ಇಲ್ಲವೇ? ಪೊಲೀಸ್ ಇಲಾಖೆ, ಗುಪ್ತಚರ ದಳ ಏನು ಮಾಡುತ್ತಿದೆ. ಇನ್ನು ಸಚಿವ ಪ್ರಭು ಚೌಹಾಣ್ ಫೆಬ್ರವರಿಯಲ್ಲಿ ಈ ನೇಮಕದಲ್ಲಿ ಅಕ್ರಮವಾಗಿದೆ ಎಂದು ಮೊದಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಅವರಿಗೆ ನೊಟೀಸ್ ಕೊಟ್ಟು ವಿಚಾರಣೆ ಮಾಡಬಹುದಿತ್ತಲ್ಲವೇ? ಯಾಕೆ ಮಾಡಿಲ್ಲ? ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಕೊಟ್ಟಿರುವುದು ಹಾಗೂ ಅವರು ಅಧಿಕಾರಿಗಳಿಗೆ ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಕೊಡುವುದರಲ್ಲಿ ತಪ್ಪೇನಿಲ್ಲ. ಆದರೆ ಮೊದಲು ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದ ಪ್ರಭು ಚೌಹಾಣ್ ಅವರ ತನಿಖೆ ಮಾಡಲಿಲ್ಲ ಯಾಕೆ?ಈ ಹಗರಣದ ಮುಖ್ಯ ರೂವಾರಿ ಎಡಿಜಿಪಿ ಅವರು ಗೃಹ ಮಂತ್ರಿಗಳಿಗೆ ಬಹಳ ಹತ್ತಿರದವರಾಗಿದ್ದು, ನನ್ನ ಪ್ರಕಾರ ಸರ್ಕಾರ ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ರಾಮಲಿಂಗಾ ರೆಡ್ಡಿ ದೂರಿದರು.