ಪಿಎಸ್ಐ ಪರೀಕ್ಷೆ ಅಕ್ರಮ: ಕೂಡಲೇ ಗೃಹ ಸಚಿವರನ್ನು ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

Prasthutha|

ನವದೆಹಲಿ: ಪಿಎಸ್ಐ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮನವಿ ಮಾಡಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲು ಆಗ್ರಹಿಸಿದರು.

- Advertisement -

 ನಿಯೋಗದಲ್ಲಿ ಪಕ್ಷದ ಹಿರಿಯ ಮುಖಂಡ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್  ಹಾಗೂ ಪಕ್ಷದ ಅನೇಕ ಮುಖಂಡರು ಇದ್ದರು.

ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರನ್ನು ಮಂಗಳವಾರ ಭೇಟಿ ಮಾಡಿದ ಪೃಥ್ವಿ ರೆಡ್ಡಿಯವರು ಮೂರು ಆಗ್ರಹಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದರು. ಇವುಗಳನ್ನು ಶೀಘ್ರ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಮನವಿ ಮಾಡಿದರು.

- Advertisement -

ಮೊದಲನೆಯದಾಗಿ, ರಾಜ್ಯದ  52,000 ಅಭ್ಯರ್ಥಿಗಳು ಪಿಎಸ್ಐ ಪರೀಕ್ಷೆ ಬರೆದಿದ್ದಾರೆ. ಈಗ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳನ್ನು ಕಾಯಿಸದೇ ಶೀಘ್ರವೇ ಮರುಪರೀಕ್ಷೆ ನಡೆಸಬೇಕಾದ ಅವಶ್ಯಕತೆಯಿದೆ. ಇದಕ್ಕಾಗಿ ನೂತನ ಪ್ರಾಧಿಕಾರ ರಚಿಸಿ ಪಾರದರ್ಶಕವಾಗಿ ಪರೀಕ್ಷಾ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಪೃಥ್ವಿ ರೆಡ್ಡಿ ಮನವಿ ಮಾಡಿದರು.

ಎರಡನೆಯದಾಗಿ, ಪಿಎಸ್ ಐ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿ ಪ್ರಸ್ತುತ ನಡೆಯುತ್ತಿರುವ ಸಿಐಡಿ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಅಲ್ಲದೇ, ರಾಜ್ಯ ಸರ್ಕಾರವು ತನ್ನ ಪ್ರಭಾವ ಬಳಸಿ ತನಿಖೆಯು ವಿಳಂಬವಾಗುವಂತೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ ತನಿಖೆಗೆ ಕಾಲಮಿತಿ ನಿಗದಿಪಡಿಸಬೇಕು. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಪೃಥ್ವಿ ರೆಡ್ಡಿ  ಮನವಿ ಮಾಡಿದರು.

ಮೂರನೇಯದಾಗಿ, ರಾಜ್ಯ ಸಚಿವ ಸಂಪುಟದಲ್ಲಿ ಗೃಹ ಇಲಾಖೆಯು ಅತ್ಯಂತ ಸೂಕ್ಷ್ಮವಾದ ಇಲಾಖೆಯಾಗಿದೆ. ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಸಾಮರ್ಥ್ಯ ಹಾಗೂ ಅನುಭವದ ಕೊರತೆಯಿರುವುದು ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಿಂದಲೂ ಸಾಬೀತಾಗುತ್ತಿದೆ. ಆದ್ದರಿಂದ ಕೂಡಲೇ ಅವರನ್ನು ವಜಾ ಮಾಡಿ ಸಮರ್ಥರನ್ನು ಗೃಹ ಸಚಿವ ಸ್ಥಾನಕ್ಕೆ ನೇಮಿಸಬೇಕು. ಈ ಕುರಿತು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಭಾಸ್ಕರ್ ರಾವ್  ಮನವಿ ಮಾಡಿದರು.

ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ನಾಗಣ್ಣ ಗೌಡ, ಚನ್ನಪ್ಪಗೌಡ ನೆಲ್ಲೂರು ಹಾಗೂ ಜಗದೀಶ್ ಚಂದ್ರರವರು ಭಾಗವಹಿಸಿದ್ದರು.

Join Whatsapp