ತಿರುಪತಿ | ಆಂಬುಲೆನ್ಸ್ ದುಬಾರಿ: ಬೈಕ್ ನಲ್ಲಿ ಮಗನ ಮೃತದೇಹ ಅಪ್ಪಿಕೊಂಡೇ ಹೊತ್ತೊಯ್ದ ತಂದೆ

Prasthutha|

ತಿರುಪತಿ: ಆಂಬುಲೆನ್ಸ್ ಚಾಲಕನೋರ್ವ ಮೃತದೇಹ ಕೊಂಡೊಯ್ಯಲು ಹತ್ತು ಸಾವಿರ ರೂ. ಬೇಡಿಕೆ ಇಟ್ಟ ಪರಿಣಾಮ ದಿಕ್ಕು ತೋಚದ ತಂದೆಯೋರ್ವ ತನ್ನ ಮಗನ ಶವವನ್ನು ಅಪ್ಪಿಕೊಂಡೇ ಬೈಕ್ ಮೂಲಕ ಸುಮಾರು 90 ಕಿ.ಮೀ ದೂರದವರೆಗೆ ಕೊಂಡೊಯ್ದ ಮನಕಲಕುವ ಘಟನೆ ತಿರುಪತಿಯಲ್ಲಿ ನಡೆದಿದೆ. ಆರ್ ಯುಐಎ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ತಂದೆ ಮಗನ ಶವ ಹೊತ್ತೊಯ್ಯುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -


ಅನಾರೋಗ್ಯದಿಂದ ಬಳಲುತ್ತಿದ್ದ ಜೇಸವಾ ಎಂಬ ಹತ್ತು ವರ್ಷದ ಬಾಲಕನೋರ್ವ ತಿರುಪತಿಯ RUIA ಆಸ್ಪತ್ರೆಯಲ್ಲಿ ಸೋಮವಾರ ಸಾವನ್ನಪ್ಪಿದ್ದಾನೆ. ಬಳಿಕ ಬಾಲಕನ ಊರಾದ ಅನ್ನಮಯ್ಯ ಜಿಲ್ಲೆಯ ಚಿಟ್ವೇಲ್ ಗೆ ಶವ ಕೊಂಡೊಯ್ಯಲು ಆಂಬುಲೆನ್ಸ್ ಚಾಲಕ ಹತ್ತು ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾನೆ.

ಇದೇ ವೇಳೆ ದಿಕ್ಕು ತೋಚದ ತಂದೆ ಸಂಬಂಧಿಕನಿಗೆ ಕರೆ ಮಾಡಿ ವಿಷಯ ತಿಳಿಸಿದ ಪರಿಣಾಮ ಉಚಿತ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಇದಕ್ಕೂ ಅಡ್ಡಿಪಡಿಸಿದ ಆಂಬುಲೆನ್ಸ್ ಚಾಲಕ ಬೇರೆ ಆಂಬುಲೆನ್ಸ್’ಗೆ ಅನುಮತಿ ನೀಡುವುದಿಲ್ಲ ಎಂದು ಬೆದರಿಸಿದ್ದಾನೆ.

- Advertisement -


ಚಾಲಕನ ನಡೆಗೆ ತೀವ್ರ ಬೇಸರಗೊಂಡ ತಂದೆ, ಮಗನ ದೇಹವನ್ನು ಅಪ್ಪಿ ಹಿಡಿದುಕೊಂಡು ಬೈಕ್ ಹಿಂಬದಿಯಲ್ಲಿ ಕುಳಿತು ಸಾಗಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಂಬುಲೆನ್ಸ್ ಚಾಲಕನ ಅಮಾನವೀಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.


ಈ ಕುರಿತು ಟ್ವೀಟ್ ಮಾಡಿರುವ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಡ ತಂದೆಗೆ ಬೇರೆ ದಾರಿ ಇಲ್ಲದೆ ಮಗುವನ್ನು ಬೈಕ್ ನಲ್ಲಿ 90 ಕಿ.ಮೀ. ದೂರ ಹೊತ್ತೊಯ್ದಿದ್ದಾರೆ. ಈ ಹೃದಯವಿದ್ರಾವಕ ಘಟನೆಯು ರಾಜ್ಯದಲ್ಲಿನ ಆರೋಗ್ಯ ರಕ್ಷಣಾ ಸೌಕರ್ಯಗಳಿಗೆ ಹಿಡಿದಿರುವ ಕನ್ನಡಿಯಾಗಿದೆ. ವೈ.ಎಸ್.ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ ಆಂಧ್ರ ಪ್ರದೇಶವು ನಲುಗುತ್ತಿದೆ ಎಂದು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

Join Whatsapp