ಪಿಎಸ್ಐ ಅಕ್ರಮ‌‌ ನೇಮಕ ಕೊಲೆಗಿಂತ ಗಂಭೀರ ಅಪರಾಧ: ಹೈಕೋರ್ಟ್

Prasthutha|

ಬೆಂಗಳೂರು: ಪಿಎಸ್ಐ ಅಕ್ರಮ‌‌ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದ್ದು, ಕೊಲೆಗಿಂತ ಗಂಭೀರವಾದ ಅಪರಾಧ. ಕೊಲೆಯಾದರೆ ಒಬ್ಬ ಸಾವಿಗೀಡಾಗುತ್ತಾನೆ. ಆದರೆ ಇಲ್ಲಿ 50 ಸಾವಿರ ಅಭ್ಯರ್ಥಿಗಳು ತೊಂದರೆಗೀಡಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಅಕ್ರಮ ನೇಮಕಾತಿ ಸಮಾಜಕ್ಕೆ ಬಹು ದೊಡ್ಡ ಬೆದರಿಕೆಯಾಗಿದೆ. ಪ್ರತಿ ನೇಮಕದಲ್ಲೂ ಹೀಗೇ ಆದರೆ ಕೋರ್ಟ್ ಕಣ್ಮುಚ್ಚಿ ಕೂರಬೇಕೇ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಪ್ರಶ್ನಿಸಿದ್ದಾರೆ.

ಇದೇ ಜು.20 ಕ್ಕೆ ತನಿಖಾ ಪ್ರಗತಿ ವಿವರಗಳನ್ನು ಸಲ್ಲಿಸಲು ಸೂಚನೆ ನೀಡಿ ಪಿಎಸ್ಐ ಅಭ್ಯರ್ಥಿಗಳು ವಿಸಿ ಮೂಲಕ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ‌ಅರ್ಜಿ ಸಲ್ಲಿಸದೇ ವಿಸಿ ಮೂಲಕ ವಾದಮಂಡನೆ ಮಾಡುವಂತಿಲ್ಲ ಎಂದು ಅಭ್ಯರ್ಥಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಆರೋಪಿಗಳ ಕರೆ ವಿವರವನ್ನು ಪರಿಶೀಲಿಸಲಾಗುತ್ತಿದ್ದು, ಸಿಐಡಿ ಡಿಜಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ನಿರ್ಲಜ್ಜ ವ್ಯಕ್ತಿಗಳಿಂದ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಜಾಮೀನು ನೀಡದಂತೆ ಎಸ್ಪಿಪಿ ವಿ.ಎಸ್.ಹೆಗ್ಡೆ ಮನವಿ ಮಾಡಿದ್ದಾರೆ.

ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಎಸಗಿರುವ ಆರೋಪದಡಿ ‌ಬಂಧಿತರಾಗಿರುವ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಬುಧವಾರ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದು, ಮತ್ತೆ ಮೂರು ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.

ವಿಚಾರಣೆ ವೇಳೆ ಪೌಲ್ ನಾನೇನು ತಪ್ಪು ಮಾಡಿಲ್ಲ.. ನಡೆದಿರುವ ಅವ್ಯವಹಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ತನಿಖಾಧಿಕಾರಿಗಳ‌ ಮುಂದೆ ಹೇಳಿಕೆ ನೀಡಿದ್ದರು. ಜೊತೆಗೆ ನೇಮಕಾತಿ ವಿಭಾಗದಲ್ಲಿ ಕೆಲಸ‌ ಮಾಡುತ್ತಿದ್ದ ಡಿವೈಎಸ್ಪಿ ಶಾಂತಕುಮಾರ್, ಸಿಬ್ಬಂದಿ ಶ್ರೀಧರ್, ಹರ್ಷ, ಶ್ರೀನಿವಾಸ್ ಅವರನ್ನು ಬಾಡಿ ವಾರೆಂಟ್ ಮೇರೆಗೆ ಕಸ್ಟಡಿಗೆ ಪಡೆದುಕೊಂಡು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.

Join Whatsapp