ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳ ಕಡೆಗಣನೆ: ಪರ್ಯಾಯ ಸಮಾವೇಶಕ್ಕೆ ನಿರ್ಧಾರ

Prasthutha|

ಹಾವೇರಿ: ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಮುಸ್ಲಿಂ ಸಾಹಿತಿಗಳು ಹಾಗೂ ಕವಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -

ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡ ಬೆನ್ನಲ್ಲೇ ವಿವಾದವೂ ಭುಗಿಲೆದ್ದಿದ್ದು, ಈವರೆಗೆ ರಾಜಕೀಯ ಅಸ್ತ್ರವಾಗಿಬಳಸುತ್ತಿದ್ದ ಧರ್ಮ ದ್ವೇಷ ಈಗ ಸಾಹಿತ್ಯ ಸಮ್ಮೇಳನಕ್ಕೂ ಕಾಲಿಟ್ಟಿರುವುದು ವಿಪರ್ಯಾಸ.

ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ, ಪ್ರಧಾನ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ 83 ಸಾಧಕರಿಗೆ ಸನ್ಮಾನವಿದೆ. ಆದರೆ ಆ 83 ಸಾಧಕರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಾಧಕರಿಗೆ ಸ್ಥಾನ ಇಲ್ಲ. ಒಟ್ಟು 9 ವಿಚಾರಗೋಷ್ಠಿಗಳಿದ್ದು, ಆ ಯಾವ ಗೋಷ್ಠಿಯಲ್ಲೂ ಯಾವೊಬ್ಬ ಮುಸ್ಲಿಂ ಲೇಖಕರಿಗೂ ಅವಕಾಶ ಇಲ್ಲ. ಪ್ರಧಾನ ವೇದಿಕೆಯ ಕವಿಗೋಷ್ಠಿಯಲ್ಲಿ ಒಟ್ಟು 25 ಕವಿಗಳು ಭಾಗವಹಿಸುತ್ತಿದ್ದಾರೆ. ಆದರೆ, ಕನ್ನಡದಲ್ಲಿ ಬರೆಯುವ ಒಬ್ಬನೇ ಒಬ್ಬ ಮುಸ್ಲಿಂ ಕವಿಗೂ ಅವಕಾಶವಿಲ್ಲ. ಮಹಿಳಾ ವರ್ತಮಾನ/ ದಮನಿತರ ಲೋಕ ಎಂಬ ಗೋಷ್ಠಿಯಲ್ಲೂ ಯಾವ ಮುಸ್ಲಿಂ ಮಹಿಳೆಗೂ ಅವಕಾಶ ಇಲ್ಲ. ‘ಕರ್ನಾಟಕದ ಭಾಷಾ ವೈವಿಧ್ಯ’ ಗೋಷ್ಠಿಯಲ್ಲಿ ಕೊಡವ, ತುಳು, ಕೊಂಕಣಿ, ಸೋಲಿಗ, ಅರೆಭಾಷೆಯ ಕುರಿತು ಚರ್ಚೆ ಇದೆ. ಆದರೆ ರಾಜ್ಯದಲ್ಲಿ 14 ಲಕ್ಷ ಜನ ಮಾತನಾಡುವ ಬ್ಯಾರಿ ಭಾಷೆಯ ಕುರಿತು ಪ್ರಸ್ತಾಪವೇ ಇಲ್ಲ. ಇದು ರಾಜ್ಯವ್ಯಾಪಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

- Advertisement -

ಇದು ಸಂಘಪರಿವಾರದ ಧೋರಣೆಗೆ ಅನುಸಾರವಾಗಿ ಸಮ್ಮೇಳನ ಸಮಿತಿ ಮಾಡಿರುವ ಕುತಂತ್ರ. ಧರ್ಮದ್ವೇಷದ ಅಜೆಂಡಾದ ಭಾಗವಾಗಿ ಮುಸ್ಲಿಮರನ್ನು ಸಮ್ಮೇಳನದಿಂದ ದೂರವಿಡುವ ಉದ್ದೇಶಪೂರ್ವಕ ತಂತ್ರ ಇದು ಎಂದು ಕನ್ನಡ ಬರಹಗಾರರ ಒಂದು ವಿಭಾಗ ಆಕ್ಷೇಪಿಸಿತ್ತು.

ಇದರಿಂದಾಗಿ ಬಂಡಾಯವೆದ್ದಿರುವ ಕನ್ನಡದ ಕೆಲವು ಹಿರಿಯ ಸಾಹಿತಿಗಳು ಜನವರಿ 8ರಂದು ಬೆಂಗಳೂರಿನಲ್ಲಿ ಜನ ಸಾಹಿತ್ಯ ಸಮ್ಮೇಳನ ಎಂಬ ಪರ್ಯಾಯ ಸಮಾವೇಶವನ್ನು ಆಯೋಜಿಸಲು ಮುಂದಾಗಿದ್ದಾರೆ.ಅನೇಕ ಬರಹಗಾರರು ಈ ಬಂಡಾಯ ಕಾರ್ಯಕ್ರಮದ ಭಾಗವಾಗಲು ಒಪ್ಪಿಕೊಂಡಿದ್ದಾರೆ.

ಆದರೆ, ಸಮ್ಮೇಳನದ ಹೆಸರಿನಲ್ಲಿ ಕ್ಷುಲ್ಲಕ ರಾಜಕಾರಣ ಮಾಡಲಾಗುತ್ತಿದೆ. ಧರ್ಮದ ಆಧಾರದ ಮೇಲೆ ಬರಹಗಾರರನ್ನು ತಪ್ಪಿಸುವ ಉದ್ದೇಶ ಕನ್ನಡ ಸಾಹಿತ್ಯ ಪರಿಷತ್ತಿಗಿಲ್ಲ  ಎಂದು ಸಂಘಟಕರು ಹೇಳಿದ್ದಾರೆ. ‘ಹಾವೇರಿ ಸಮ್ಮೇಳನದಲ್ಲಿ ಆರು ಮುಸ್ಲಿಂ ಲೇಖಕರು ಮತ್ತು ಕವಿಗಳು ಭಾಗವಹಿಸಿದ್ದಾರೆ. ಆದರೆ, ಕನ್ನಡದ ದೊಡ್ಡ ಕಾರ್ಯಕ್ರಮದ ವೇಳೆ ಕೆಲವರು ವಿವಾದ ಸೃಷ್ಟಿಸುವುದು ವಾಡಿಕೆಯಾಗಿದೆ’ ಎಂದು ಸಂಘಟನಾ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

Join Whatsapp