ದ್ವೇಷಾಪರಾಧ ಕಡೆಗಣಿಸಿದರೆ ಒಂದು ದಿನ ಅದು ನಿಮಗೇ ಸವಾಲಾಗುತ್ತದೆ: ಸುಪ್ರೀಂ ಕೋರ್ಟ್ ಎಚ್ಚರಿಕೆ

Prasthutha|

ನವದೆಹಲಿ: ದೆಹಲಿ ಸಮಿಪದ ನೋಯ್ಡಾದಲ್ಲಿ 2021ರಲ್ಲಿ ನಡೆದಿತ್ತೆನ್ನಲಾದ ದ್ವೇಷಾಪರಾಧಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದೂರು ದಾಖಲಿಸಿಕೊಳ್ಳಲು ವಿಳಂಬ ತೋರಿದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಬೇಸರ ವ್ಯಕ್ತಪಡಿಸಿದೆ.

- Advertisement -


ದೂರಿನ ಪ್ರತಿ ನೀಡುವಂತೆ ಮತ್ತು ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಸರ್ಕಾರದ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಸೂಚಿಸಿತು.


ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಕೆ ಎಂ ನಟರಾಜ್ ಅವರನ್ನು ಉದ್ದೇಶಿಸಿದ ನ್ಯಾ. ಜೋಸೆಫ್, ʼಇಂತಹ ದ್ವೇಷಾಪರಾಧದ ಕಳೆಯನ್ನು ಕಿತ್ತೊಗೆಯುವುದು ಜಾತ್ಯತೀತ ಸರ್ಕಾರದ ಕರ್ತವ್ಯʼ ಎಂದರು.

- Advertisement -

ನ್ಯಾಯಾಲಯದ ಪ್ರಮುಖ ಅವಲೋಕನಗಳು
ಜಾತ್ಯತೀತ ದೇಶದಲ್ಲಿ ಧರ್ಮವನ್ನು ಆಧರಿಸಿ ದ್ವೇಷಾಪರಾಧ ನಡೆಸುವುದಕ್ಕೆ ಜಾಗವಿಲ್ಲ; ಅದನ್ನು ಬೇರುಸಹಿತ ಕಿತ್ತೊಗೆಯಬೇಕು. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಅದು ಕೊನೆಯಾಗುತ್ತದೆ. ಇದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.
ದ್ವೇಷಾಪರಾಧದ ಜೊತೆಗೆ ಇತರ ಅಪರಾಧಗಳೂ ನಡೆಯಬಹುದು. ಅಂತಹ ಅಪರಾಧಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಅಪಾಯಕಾರಿ ವಾತಾವರಣವನ್ನು ಬೆಳೆಸಿದಂತಾಗಿ ಅದು ನಮ್ಮ ಬದುಕಿನೊಂದಿಗೆ ಬೇರೂರುತ್ತದೆ.
ಉತ್ತರ ಪ್ರದೇಶ ಸರ್ಕಾರ ಘಟನೆಯನ್ನು ನಿರ್ಲಕ್ಷಿಸುವಂತಿಲ್ಲ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಸರಿಸಮನಾದ ಮಾದರಿಯನ್ನು ಪೊಲೀಸ್ ಅಧಿಕಾರಿಗಳು ರೂಢಿಸಿಕೊಳ್ಳಬೇಕು.
ನ್ಯಾಯಾಲಯ ಪ್ರತಿಕೂಲವಾದ ಏನನ್ನೂ ಹೇಳುತ್ತಿಲ್ಲ. ನಾವು ನಮ್ಮ ದುಃಖವನ್ನು ಮಾತ್ರ ಹೇಳುತ್ತಿದ್ದೇವೆ. ಅಲ್ಪಸಂಖ್ಯಾತರಾಗಿರಲಿ ಅಥವಾ ಬಹುಸಂಖ್ಯಾತರಾಗಿರಲಿ, ಮಾನವ ಜೀವಿಗಳಲ್ಲಿ ಅಂತರ್ಗತವಾಗಿರುವ ಕೆಲವು ಹಕ್ಕುಗಳಿವೆ. ನಾವೆಲ್ಲರೂ ಒಂದು ಕುಟುಂಬದಲ್ಲಿ ಹುಟ್ಟಿ ಅದರಲ್ಲಿ ಬೆಳೆಯುತ್ತೇವೆ. ಆದರೆ ನಾವೆಲ್ಲಾ ಒಂದು ರಾಷ್ಟ್ರವಾಗಿ ರೂಪುತಳೆಯುತ್ತೇವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ದ್ವೇಷ ಭಾಷಣದ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಇಂದಿನ ವಿಚಾರಣೆ ವೇಳೆ ನೋಯ್ಡಾದಲ್ಲಿ ದ್ವೇಷಾಪರಾಧಕ್ಕೆ ತುತ್ತಾದ 62 ವರ್ಷದ ಕಜೀಮ್ ಅಹ್ಮದ್ ಶೆರ್ವಾನಿ ಅವರು ಸಲ್ಲಿಸಿದ್ದ ಮನವಿಯನ್ನು ಅದು ಆಲಿಸಿತು. ಪ್ರಕರಣದ ಮುಂದಿನ ವಿಚಾರಣೆ 3 ಮಾರ್ಚ್ 2023ರಂದು ನಡೆಯಲಿದೆ.

ಕಳೆದ ವರ್ಷ ಜುಲೈನಲ್ಲಿ, ಶಕ್ತಿ ವಾಹಿನಿ ಮತ್ತು ತೆಹಸೀನ್ ಪೂನವಾಲಾ ಪ್ರಕರಣಗಳ ತೀರ್ಪುಗಳಲ್ಲಿ ದ್ವೇಷಭಾಷಣ ತಡೆಯುವ ನಿಟ್ಟಿನಲ್ಲಿ ನೀಡಲಾದ ನಿರ್ದೇಶನಗಳನ್ನು ಅನುಸರಿಸಲಾಗಿದೆಯೇ ಎಂಬ ಕುರಿತು ವಿವರವನ್ನು ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ದೇಶದ ಸುದ್ದಿ ವಾಹಿನಿಗಳು ದ್ವೇಷ ಭಾಷಣ ಹರಡುತ್ತಿರುವ ಬಗ್ಗೆ ಅದು ಅಸಮಾಧಾನವ್ಯಕ್ತಪಡಿಸಿತ್ತು. ಅಪರಾಧಿಗಳ ಧರ್ಮ ಲೆಕ್ಕಿಸದ ದ್ವೇಷ ಭಾಷಣ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಪೊಲೀಸರಿಗೆ ನ್ಯಾಯಾಲಯ ಅಕ್ಟೋಬರ್ನಲ್ಲಿ, ಆದೇಶಿಸಿತ್ತು.ಇತ್ತೀಚಿನ ಧಾರ್ಮಿಕ ಸಭೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನೀಡಲಾದ ಕೆಲವು ಹೇಳಿಕೆ ಮತ್ತು ದ್ವೇಷಭಾಷಣಗಳಿಗೆ ನ್ಯಾಯಮೂರ್ತಿಗಳು ಆಘಾತ ವ್ಯಕ್ತಪಡಿಸಿದ್ದರು. ಕಳೆದ ವಿಚಾರಣೆ ವೇಳೆ ದ್ವೇಷಭಾಷಣ ನಿಗ್ರಹಿಸದ ರಾಷ್ಟ್ರೀಯ ಪ್ರಸಾರ ಮಾನದಂಡ ಪ್ರಾಧಿಕಾರವನ್ನು (ಎನ್ ಬಿಎಸ್ ಎ) ಅದು ತರಾಟೆಗೆ ತೆಗೆದುಕೊಂಡಿತ್ತು. ಇತ್ತ ಕೇಂದ್ರ ಸರ್ಕಾರ ʼದ್ವೇಷ ಭಾಷಣ ನಿಭಾಯಿಸಲು ಸಿಆರ್ಪಿಸಿಗೆ ಸಮಗ್ರ ತಿದ್ದುಪಡಿ ತರಲು ಯೋಜಿಸಲಾಗುತ್ತಿದೆ ಎಂದಿತ್ತು.
(ಕೃಪೆ: ಬಾರ್ & ಬೆಂಚ್)