ನವದೆಹಲಿ: 18 ವರ್ಷದ ಯುವತಿಗೆ ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಹಕ್ಕು ಇದೆ. ಆದರೆ, ಆಕೆ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ತಕರಾರು ಯಾಕೆ ಎಂದು ಎಐಎಂಎಂ ಸಂಸದ ಅಸದುದ್ದೀನ್ ಉವೈಸಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರಂಕುಶ ಆಡಳಿತಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಭಾರತದ ಪ್ರಜೆಯೊಬ್ಬ 18 ವಯಸ್ಸಿಗೆ ಕರಾರು ಪತ್ರಕ್ಕೆ, ಉದ್ಯಮ ಆರಂಭಿಸಲು ಸಹಿ ಹಾಕಬಹುದು, ಪ್ರಧಾನಿ, ಸಂಸದ, ಶಾಸಕರನ್ನು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ಯುವಕರ ವಿವಾಹ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಕೆ ಮಾಡಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.
ದೇಶದ ಮಹಿಳೆಯರ ಏಳಿಗೆಗಾಗಿ ಈ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು. ಭಾರತದಲ್ಲಿ ಬಾಲ್ಯ ವಿವಾಹದ ಸಂಖ್ಯೆ ಇಳಿಕೆಯಾಗಿರುವುದು ಕೇವಲ ಕ್ರಿಮಿನಲ್ ಕಾಯ್ದೆಯಿಂದ ಮಾತ್ರವಲ್ಲ, ಇದಕ್ಕೆ ಶಿಕ್ಷಣ ಹಾಗೂ ಆರ್ಥಿಕ ಅಭಿವೃದ್ಧಿಯ ಕೊಡುಗೆಯೂ ಇದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರದ ಗಣತಿಯ ಪ್ರಕಾರ ಸುಮಾರು 12 ಮಿಲಿಯನ್ ಬಾಲ್ಯವಿವಾಹ (18 ವರ್ಷಕ್ಕಿಂತ ಕೆಳಗೆ) ನಡೆದಿರುವುದಾಗಿ ತಿಳಿಸಿದೆ. ಈ ಸರ್ಕಾರ ಮಹಿಳೆಯರ ಏಳಿಗೆಗಾಗಿ ಏನನ್ನೂ ಮಾಡಿಲ್ಲ ಎಂಬುದು ಬಹಿರಂಗವಾಗಿದೆ ಎಂದು ದೂರಿದರು.