ಸಚಿವ ಈಶ್ವರಪ್ಪ ರಾಜೀನಾಮೆ ನೀಡದಿದ್ದಲ್ಲಿ ಒಂದು ತಿಂಗಳು ಕಾಮಗಾರಿ ಸ್ಥಗಿತ: ರಾಜ್ಯ ಗುತ್ತಿಗೆದಾರರ ಸಂಘ

Prasthutha|

ಸಂತೋಷ್ ಕುಟುಂಬಕ್ಕೆ 2 ಕೋಟಿ ಪರಿಹಾರಕ್ಕೆ ಒತ್ತಾಯ

- Advertisement -

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡದಿದ್ದಲ್ಲಿ ಒಂದು ತಿಂಗಳು ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಹೇಳಿದೆ.

ಈ ಬಗ್ಗೆ ಚಾಮರಾಜಪೇಟೆಯ ಗುತ್ತಿಗೆದಾರರ ಸಂಘದ ಕೇಂದ್ರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳದ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಈಶ್ವರಪ್ಪರ ರಾಜೀನಾಮೆ ಪಡೆಯುವ ಜೊತೆಗೆ, ರಾಜ್ಯ ಸರಕಾರ ಕಮಿಷನ್ ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಒಂದು ತಿಂಗಳ ಕಾಲ ಎಲ್ಲ ರೀತಿಯ ಕಾಮಗಾರಿ ನಿಲ್ಲಿಸಲಾಗುವುದು ಎಂದು ಹೇಳಿದರು.

- Advertisement -

ಬಿಜೆಪಿ ಸದಸ್ಯರೂ ಆದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟಿನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಸಂತ್ರಸ್ತ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು. ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಇನ್ನೂ, ಈ ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಿದೆ. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಾವಿಗೆ ಯಾರು ಕಾರಣವೆಂದು  ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸಚಿವರು ಶೇ.40ರಷ್ಟು ಕಮೀಷನ್ ಕೇಳುತ್ತಿದ್ದಾರೆಂದು ಆರೋಪ ಮಾಡಿದ್ದರು. ಇನ್ನೂ,  ದಿಲ್ಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾಗೆ ಪ್ರಧಾನಿ ಮೋದಿಗೂ ದೂರು ಸಲ್ಲಿಸಿದ್ದರು. ದಿಲ್ಲಿಯಲ್ಲಿ ದೂರು ಕೊಟ್ಟಾಗಲೇ ಸ್ಪಂದನೆ ಮಾಡಿದ್ದರೆ ಜೀವ ಉಳಿಯುತ್ತಿತ್ತು. ಸಚಿವರು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಜೀವ ಬಲಿಯಾಗುತ್ತಿರಲಿಲ್ಲ ಎಂದು ಕೆಂಪಣ್ಣ ಬೇಸರ ವ್ಯಕ್ತಪಡಿಸಿದರು.

Join Whatsapp