ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 7 ಕೆ.ಜಿ ಬದಲಾಗಿ 10 ಕೆ.ಜಿ ಉಚಿತ ಅಕ್ಕಿ: ಸಿದ್ದರಾಮಯ್ಯ

Prasthutha|

ಕೊಪ್ಪಳ: ಕೊಪ್ಪಳದಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 7 ಕೆ.ಜಿ ಬದಲಾಗಿ 10 ಕೆ.ಜಿ ಉಚಿತ ಅಕ್ಕಿ ನೀಡುತ್ತೇವೆ ಎಂದು ಹೇಳಿದರು.

- Advertisement -

ನಾನು ಮುಖ್ಯಮಂತ್ರಿಯಾಗಿದ್ದಾಗ ಬಡವರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಜಾರಿಗೆ ತಂದಿದ್ದೆ, ಆದರೆ ಅದನ್ನು ಈಗ 5 ಕೆ.ಜಿ ಗೆ ಇಳಿಸಿದ್ದಾರೆ. ಬಡ ಜನರ ಅಕ್ಕಿ ಕಸಿಯುತ್ತಿದ್ದೀರಲ್ಲ ಅದಕ್ಕೆ ಹಣವನ್ನು ಸರ್ಕಾರ ತಮ್ಮ ಮನೆಯಿಂದ ತಂದು ಕೊಡುತ್ತಿದೆಯಾ? ನಮ್ಮ ಸರ್ಕಾರದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟೆವು. ಬಿಜೆಪಿ ಸರ್ಕಾರ ಬಂದು ಮೂರುವರೆ ವರ್ಷ ಆಗಿದೆ ಒಂದೇ ಒಂದು ಮನೆ ಕಟ್ಟಿಸಿಕೊಟ್ಟ ನಿದರ್ಶನ ಇದೆಯಾ? ಅನ್ನಭಾಗ್ಯ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಅದು ಗುಜರಾತ್‌, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಯಾಕಿಲ್ಲ? ಅಲ್ಲೂ ಬಿಜೆಪಿ ಸರ್ಕಾರಗಳೇ ಇರುವುದು ಅಲ್ಲವೇ? ಎಂದು ಪ್ರಶ್ನಿಸಿದರು.

‘1991ರಲ್ಲಿ, ಆ ವರ್ಷ ನಾನು ಲೋಕಸಭೆಗೆ ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದೆ, ರಾಜೀವ್‌ ಗಾಂಧಿ ಅವರ ಹತ್ಯೆಯಾದ ಕಾರಣದಿಂದ ನಾನು ಆ ಚುನಾವಣೆಯಲ್ಲಿ ಸೋತೆ. ಲೋಕಸಭಾ ಚುನಾವಣೆಯಲ್ಲಿ ಸೋತದ್ದೆ ಅನುಕೂಲವಾಯಿತೇನೋ ಅನ್ನಿಸುತ್ತೆ, ಕಾರಣ ನಾನು ನಂತರ ರಾಜ್ಯದ ಮುಖ್ಯಮಂತ್ರಿಯಾದೆ. ನಾನು ಮೈಸೂರಿನಿಂದ ಬಂದು ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ರೂ ಕೂಡ ಇಲ್ಲಿನ ಜನ ನನ್ನನ್ನು ಅತೀ ಪ್ರೀತಿಯಿಂದ ಬರಮಾಡಿಕೊಂಡು, ನನಗೆ ಬೆಂಬಲ ನೀಡಿದ್ದರು. ನಾನು ಮುಂದಿನ ಚುನಾವಣೆಯಲ್ಲಿ ಕುಷ್ಟಗಿಯಿಂದ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ವಿನಮ್ರವಾಗಿ ಹೇಳಲು ಬಯಸುತ್ತೇನೆ’ ಎಂದರು.

- Advertisement -

‘ಇಲ್ಲಿನ ಬಿಜೆಪಿ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ಇಡೀ ರಾಜ್ಯದ ಜನ ಮಾತನಾಡುತ್ತಿದ್ದಾರೆ, ಇದು ಲಂಚದ ಸರ್ಕಾರ ಎಂದು ವಿಧಾನಸೌಧದ ಗೋಡೆಗಳು ಹೇಳುತ್ತಿವೆ. ಪ್ರತೀ ಕಾಮಗಾರಿಗೆ 40% ಕಮಿಷನ್‌ ನಿಗದಿ ಮಾಡಲಾಗಿದೆ, ಇದನ್ನು ಕೊಡಲು ಆಗಲ್ಲ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ, ಮಾತೆತ್ತಿದರೆ ನ ಖಾವೂಂಗ ನ ಖಾನೆದೂಂಗ ಎನ್ನುತ್ತಾರೆ, ಆದರೆ ಈ ಪತ್ರದ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಹೇಳಿದರು. ಬಿಜೆಪಿ ಅವರು 2018ರ ಚುನಾವಣೆ ವೇಳೆ ಜನರಿಗೆ 60 ಭರವಸೆಗಳನ್ನು ನೀಡಿದ್ದರು ಅದರಲ್ಲಿ ಈವರೆಗೆ 25 ಭರಸವೆಗಳನ್ನು ಮಾತ್ರ ಈಡೇರಿಸಿದ್ದಾರೆ. ಇನ್ನು 35 ಭರವಸೆಗಳನ್ನು ಅರ್ಧಂಬರ್ದ ಈಡೇರಿಸಿದ್ದಾರೆ, ನಾವು 2013ರಲ್ಲಿ ಜನರಿಗೆ 167 ಭರವಸೆಗಳನ್ನು ನೀಡಿ ಅದರಲ್ಲಿ 165 ಭರವಸೆಗಳನ್ನು ಜಾರಿ ಮಾಡಿ, ಇವುಗಳ ಜೊತೆಗೆ ಹೆಚ್ಚುವರಿಯಾಗಿ 25 ಕಾರ್ಯಕ್ರಮಗಳನ್ನು ನೀಡಿ ನುಡಿದಂತೆ ನಡೆದಿದ್ದೆವು. ಬಿಜೆಪಿ ಜನರಿಗೆ ಟೋಪಿ ಹಾಕಿದವರು. ಇಂಥವರು ಮತ್ತೆ ಅಧಿಕಾರಕ್ಕೆ ಬರಬೇಕಾ?’ ಎಂದು ಕೇಳಿದರು.

‘ಹಿಂದೊಮ್ಮೆ ನಾನು ಮಹಾದಾಯಿ ನೀರಾವರಿ ಯೋಜನೆ ಜಾರಿಗೆ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿದ್ದೆ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಗೋವಾದ ಸರ್ಕಾರವನ್ನು ಒಪ್ಪಿಸಿಕೊಂಡು ಬನ್ನಿ, ಆಮೇಲೆ ನಾನು ಮಾತಾಡುತ್ತೇನೆ ಎಂದರು. ಹಿಂದೆ ಇಂದಿರಾ ಗಾಂಧಿ ಅವರು ಅಂತಾರಾಜ್ಯ ಜಲವಿವಾದಗಳನ್ನು ಬಗೆಹರಿಸಿದ್ದಾರೆ, ನೀವು ಆ ಕೆಲಸ ಮಾಡಿ ಎಂದು ಒತ್ತಾಯ ಮಾಡಿದೆ, ಗೋವಾ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇದೆ, ರಾಜ್ಯದಿಂದ ಮುಖ್ಯಮಂತ್ರಿಯಾಗಿ ನಾನು ಸಿದ್ಧನಿದ್ದೇನೆ ಅಂದರೂ ಮಧ್ಯಸ್ಥಿಕೆ ವಹಿಸಲು ನಕಾರ ಮಾಡಿದರು’ ಎಂದು ಸಿದ್ದರಾಮಯ್ಯ ಹೇಳಿದರು.

‘ಮುಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 5,000 ಕೋಟಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಈ ಭಾಗದ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಪಕ್ಷ ಬದ್ಧವಾಗಿದೆ’ ಎಂದರು. ‘ಬಿಜೆಪಿಯದು ಬರೀ ಭ್ರಷ್ಟ ಸರ್ಕಾರ ಮಾತ್ರವಲ್ಲ ರೈತ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಹಿಂದುಳಿದ ಸಮುದಾಯಗಳ ವಿರೋಧಿ ಸರ್ಕಾರ. ಇಂಥಾ ಸರ್ಕಾರವನ್ನು ಕಿತ್ತೊಗೆಯದೆ ಹೋದರೆ ರಾಜ್ಯ ಅಭಿವೃದ್ಧಿ ಇನ್ನು 10 ವರ್ಷ ಹಿಂದಕ್ಕೆ ಹೋಗಲಿದೆ. ಇಂದು ಪ್ರಜಾಪ್ರಭುತ್ವಕ್ಕೆ ರಕ್ಷಣೆ ಇಲ್ಲದಾಗಿದೆ. ಕೋಮುವಾದದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತು ಜನಪರವಾದ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು’ ಎಂದು ಹೇಳಿದರು.

Join Whatsapp