ಮಹಿಳೆಯ ಬೆತ್ತಲೆ ಮೆರವಣಿಗೆ, ಹತ್ರಾಸ್,ಉನ್ನಾವೋ, ಕಥುವಾ ಪ್ರಕರಣಗಳ ಬಗ್ಗೆ ತುಟಿ ಬಿಚ್ಚದ ಮೋದಿ ಪ್ರಧಾನಿಯಾಗಿರಲಿಕ್ಕೆ ನಾಲಾಯಕ್ಕು: SDPI

Prasthutha|

ಬೆಂಗಳೂರು: ಮಣಿಪುರದಲ್ಲಿ ನೂರಾರು ಮಹಿಳೆಯರನ್ನು ಅತ್ಯಾಚಾರ ಮಾಡಿ, ಹೆಣ್ಣು ಮಕ್ಕಳನ್ನು ಬೆತ್ತಲೆ ಮೆರವಣಿಗೆ ನಡೆಸಿದಾಗ, ಹತ್ರಾಸ್, ಉನ್ನಾವೋ, ಕಥುವಾ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕ್ರೂರವಾಗಿ ಕೊಂದಾಗ, ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದುಕೊಟ್ಟ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ಬಿಜೆಪಿ ಸಂಸದನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹಗಲೂ ರಾತ್ರಿ ಪ್ರತಿಭಟನೆ ನಡೆಸಿದಾಗ ಮೋದಿಯವರು ತುಟಿ ಬಿಚ್ಚಿರಲಿಲ್ಲ. ಬಿಲ್ಕಿಸ್ ಬಾನೋ ಕುಟುಂಬದ ಕೊಲೆಗಡುಕರು, ಅತ್ಯಾಚಾರಿಗಳನ್ನು ಜೈಲಿನಿಂದ ಬಿಡಿಸಲು ಶ್ರಮಿಸಿದವರೂ ಇವರೇ. ಆದರೆ ಈಗ ಚುನಾವಣಾ ಸಂದರ್ಭದಲ್ಲಿ ಕೋಮು ಧ್ರುವೀಕರಣದ ಮೂಲಕ ಮತ ಪಡೆಯಲು ಹುಬ್ಬಳ್ಳಿಯ ನೇಹಾ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಇಂಥ ದ್ವಂದ್ವ ನಿಲುವಿನ, ಅಲ್ಪಸಂಖ್ಯಾತ ವಿರೋಧಿ ಮನಸ್ಥಿತಿಯ ವ್ಯಕ್ತಿ ಪ್ರಧಾನಿಯಾಗಿರಲಿಕ್ಕೆ ನಾಲಾಯಕ್ಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕಳೆದ ಒಂದು ವರ್ಷದಿಂದ ಮಣಿಪುರದಲ್ಲಿ ಹಿಂದೆಂದೂ ಕಂಡಿರದಂತಹ ಹಿಂಸಾಚಾರ ನಡೆಯುತ್ತಿದೆ. 250ಕ್ಕೂ ಹೆಚ್ಚು ಚರ್ಚುಗಳಿಗೆ ಬೆಂಕಿ ಹಚ್ಚಲಾಗಿದೆ, ಅಥವಾ ದ್ವಂಸ ಮಾಡಲಾಗಿದೆ. ಇದರ ಜೊತೆ ಮಹಿಳೆಯರನ್ನು ಅತ್ಯಾಚಾರ ಮಾಡಿ ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಹೆಣ್ಣು ಮಗುವನ್ನು ಕಿರಾತಕರು ಅತ್ಯಾಚಾರ ಮಾಡಿ ಕೊಂದು ಆ ಹೆಣ್ಣು ಮಗುವಿನ ಹೆಣವನ್ನೂ ಕುಟುಂಬಕ್ಕೆ ನೀಡದೆ ಕ್ರೂರ ಆದಿತ್ಯನಾಥ್ ಸರ್ಕಾರ ಮಧ್ಯರಾತ್ರಿಯಲ್ಲಿ ಹೆಣವನ್ನು ಸುಟ್ಟು ಹಾಕಿದೆ. ಅದೇ ರೀತಿ, ಉನ್ನಾವೋ ನಲ್ಲಿ ಬಿಜೆಪಿಯ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಎಂಬಾತ 17 ವರ್ಷದ ಹೆಣ್ಣು ಮಗುವನ್ನು ಅತ್ಯಾಚಾರ ಮಾಡಿ ಕೊಂದು ಹಾಕಿದ್ದ. ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಪುಟ್ಟ ಮಗುವನ್ನು ಆರು ಜನ ಕಿರಾತಕರು ದೇವಸ್ಥಾನದಲ್ಲಿ ಕೂಡಿ ಹಾಕಿ ಏಳು ದಿನಗಳ ಕಾಲ ಅತ್ಯಾಚಾರ ಮಾಡಿ ಹಿಂಸಿಸಿ ಕೊಂದಿದ್ದಾರೆ‌. ಆದರೆ ಇದೇ ಮೋದಿಯವರು ಯಾವುದೇ ಪ್ರತಿಕ್ರಿಯೆ ನೀಡದೆ ಅಮಾನವೀಯವಾಗಿ ನಡೆದುಕೊಂಡಿದ್ದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರೀಡೆಯಲ್ಲಿ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ತಂದುಕೊಟ್ಟ ಮಹಿಳಾ ಕ್ರೀಡಾಪಟುಗಳು ಬಿಜೆಪಿಯ ಸಂಸದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬೀದಿಯಲ್ಲಿ ನಿಂತು ಗೋಳಾಡಿದಾಗ ಅವರನ್ನು ತುಚ್ಛವಾಗಿ ನೋಡಿದ್ದರು ನರೇಂದ್ರ ಮೋದಿ. 2002 ರ ಗುಜರಾತ್ ನರಮೇಧದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಎಂಬ ಹೆಣ್ಣುಮಗಳ ಕುಟುಂಬದ 14 ಮಂದಿಯನ್ನು ಕೊಂದು, ಆಕೆಯನ್ನು ಅತ್ಯಾಚಾರ ಮಾಡಿದ ಹನ್ನೊಂದು ಜನ ಕ್ರೂರಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದರೂ ಅವರನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಕರೆದು ಜೈಲಿನಿಂದ ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೇ ಮೋದಿಯವರು. ಇಂತಹ ಹಿನ್ನಲೆಯ ವ್ಯಕ್ತಿ ಹುಬ್ಬಳ್ಳಿಯಲ್ಲಿ ಪ್ರೇಮ ವೈಫಲ್ಯದ ಕಾರಣಕ್ಕೆ ನಡೆದ ನೇಹಾ ಕೊಲೆಯನ್ನು ಕೇವಲ ರಾಜಕೀಯ ದುರುದ್ದೇಶಕ್ಕೆ ʼಇದು ಸಾಮಾನ್ಯ ಘಟನೆಯಲ್ಲʼ ಎಂದು ಕರೆದಿದ್ದಾರೆ. ಇದಕ್ಕಿಂತ ನೀಚ ಮನಸ್ಥಿತಿಯ ಪ್ರಧಾನಿ ಬಿಡಿ, ವ್ಯಕ್ತಿಯೂ ನಮಗೆ ಸಿಗಲಾರ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯ ಮೂಲಕ ಮೋದಿಯ ವಿರುದ್ಧ SDPI ರಾಜ್ಯಾಧ್ಯಕ್ಷ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Join Whatsapp