ಹೈದರಾಬಾದ್: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಆರೋಪದ ಮೇಲೆ ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಝ್ವಿ ಅವರ ವಿರುದ್ಧ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ದೂರು ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
‘ರಿಝ್ವಿ ಅವರು ಹಿಂದಿಯಲ್ಲಿ ಬರೆದಿರುವ ಪುಸ್ತಕದಲ್ಲಿ ಇಸ್ಲಾಂ ಮತ್ತು ಅದರ ಅನುಯಾಯಿಗಳ ವಿರುದ್ಧ ಆಕ್ಷೇಪಾರ್ಹ ಭಾಷೆಗಳನ್ನು ಬಳಸಿದ್ದಾರೆ’ ಎಂದು ಆರೋಪಿಸಿ ಸಂಸದ ಅಸದುದ್ದೀನ್ ಅವರು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಅವರಿಗೆ ಬುಧವಾರ ದೂರು ನೀಡಿದ್ದಾರೆ.
‘ಪ್ರವಾದಿ ಮುಹಮ್ಮದ್ ಅವರನ್ನು ಅನುಸರಿಸುವ ಮತ್ತು ಇಸ್ಲಾಮಿಕ್ ತತ್ವಗಳನ್ನು ಪಾಲಿಸುವವರ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ರೀತಿಯಲ್ಲಿ ಪುಸ್ತಕ ಇದೆ’ ಎಂದು ಉವೈಸಿ ದೂರಿದ್ದಾರೆ.
ಉವೈಸಿ ನೀಡಿದ ದೂರಿನ ಅನ್ವಯ, ರಿಝ್ವಿ ಮತ್ತು ಅವರ ಸಹಚರರ ವಿರುದ್ಧ 153ಎ (ಧರ್ಮವನ್ನು ಆಧರಿಸಿ ಜನರ ನಡುವೆ ದ್ವೇಷ ಬಿತ್ತುವುದು), 295ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಮತ್ತಿತರ ಐಪಿಸಿ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.