ಕೋಲಾರ ಪ್ರವೇಶಿಸಲೆತ್ನಿಸಿದ ಪ್ರಮೋದ್ ಮುತಾಲಿಕ್ ಬಂಧನ

Prasthutha|

ಭದ್ರತೆಗೆ 700 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

- Advertisement -

ಕೋಲಾರ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಕೋಲಾರ ಪ್ರವೇಶ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ದತ್ತಪೀಠಕ್ಕೆ ತೆರಳುತ್ತಿದ್ದ ಮಾಲಾಧಾರಿಗಳ ಬಸ್ ಮೇಲೆ ನಡೆದ ದಾಳಿಯನ್ನು ಖಂಡಿಸಿ ಗುರುವಾರ ಕೋಲಾರ ಬಂದ್ ಗೆ ಸಂಘಪರಿವಾರ ಕರೆ ನೀಡಿದ್ದು, ಇದೇ ವೇಳೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಕೋಲಾರ ಪ್ರವೇಶ ನಿಷೇಧ ಹೇರಲಾಗಿದೆ.

ಪ್ರಚೋದನಾತ್ಮಕ ಹೇಳಿಕೆಯಿಂದ ಕೋಮುದ್ವೇಷ ಸೃಷ್ಟಿಸುವ ಸಾಧ್ಯತೆಗಳಿದ್ದು, ಜಿಲ್ಲೆಯ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗಬಹುದಾದ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಗೆ ಕೋಲಾರ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಕೋಲಾರಕ್ಕೆ ಪ್ರವೇಶಿಸಲೆತ್ನಿಸಿದ ಪ್ರಮೋದ್ ಮುತಾಲಿಕ್ ರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಚಿಕ್ಕಮಗಳೂರು ದತ್ತಪೀಠಕ್ಕೆ ಕೋಲಾರದಿಂದ ದತ್ತ ಮಾಲಾಧಾರಿಗಳು ಬಸ್ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಕ್ಲಾಕ್ ಟವರ್ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಈ ವಿಚಾರವನ್ನು ಮುಂದಿಟ್ಟು ಸಂಘಪರಿವಾರ ಇದೇ ನೆಪವೊಡ್ಡಿ ಇದೀಗ ಇಡೀ ಕೋಲಾರ ಬಂದ್ ಗೆ ಕರೆ ನೀಡಿದೆ.

ಬಂದ್ ಗೆ ಬೆಂಬಲ ಸೂಚಿಸಿ ಗುರುವಾರ ಕೋಲಾರದಲ್ಲಿ ಸಂಘಪರಿವಾರದ ನೂರಾರು ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು. ನಗರದ ಹೊಸ ಬಸ್ ನಿಲ್ದಾಣದಿಂದ ಹಿಂದೂ ಸಂಘಟನೆಗಳ ರ್ಯಾಲಿ ಅಮ್ಮವಾರಿ ಪೇಟೆ ಸರ್ಕಲ್, ಮೆಕ್ಕೆ ಸರ್ಕಲ್, ಕಾಲೇಜು ವೃತ್ತ ಮೂಲಕ ಮೆರವಣಿಗೆ ತೆರಳಿ ಎಂಜಿ ರಸ್ತೆಯಲ್ಲಿ ಸಮಾವೇಶ ನಡೆಸಿದ್ದಾರೆ.


ಯಾವುದೇ ಅಹಿತರಕರ ಘಟನೆ ನಡೆಯದಂತೆ ಕೋಲಾರ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಸ್ಪಿ ಕಿಶೋರ್ ಬಾಬು ಹಾಗೂ ಡಿಸಿ ಡಾ.ಆರ್.ಸೆಲ್ವಮಣಿ ಸೇರಿ ಕೆಲ ಅಧಿಕಾರಿಗಳು ನಗರದಾದ್ಯಂತ ಸಂಚಾರ ನಡೆಸಿದ್ದಾರೆ.
ಬಂದ್ ಹಿನ್ನೆಲೆ ಕೋಲಾರದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ ಕೋಲಾರ, ಕೆಜಿಎಫ್, ಬೆಂಗಳೂರು ಗ್ರಾಮಾಂತರ, ಹಾಗೂ ತುಮಕೂರು ಜಿಲ್ಲೆಯಿಂದ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸುಮಾರು 700 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Join Whatsapp