ಯಾವಾಗಲೂ ಹಿಂದೂ-ಮುಸ್ಲಿಂ ಎಂದು ಜಪಿಸುತ್ತಿರುವ ಮೋದಿಯ ವಿರುದ್ಧ ಈವರೆಗೆ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆಂದು ಆರೋಪಿಸಿ ಚುನಾವಣಾ ಆಯೋಗ ನೋಟಿಸ್ ಕಳುಹಿಸಿರುವುದಕ್ಕೆ ಮಮತಾ ಬ್ಯಾನರ್ಜಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಏಪ್ರಿಲ್ 3 ರಂದು ಚುನಾವಣಾ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಅವರ ಭಾಷಣ ಕೋಮುದ್ವೇಷವನ್ನು ಪ್ರಚೋದಿಸಿದೆ ಎಂದು ಚುನಾವಣಾ ಆಯೋಗ ನೋಟಿಸ್ ಕಳುಹಿಸಿದೆ. ಬಿಜೆಪಿಯನ್ನು ಸೋಲಿಸಲು ಮುಸ್ಲಿಂ ಮತದಾರರು ಒಗ್ಗಟ್ಟಾಗಿ ಮತ ಚಲಾಯಿಸಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದರೆಂದು ಆರೋಪಿಸಲಾಗಿದೆ. ಆದರೆ ತಾನು ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಕರೆ ನೀಡಿರುವುದಾಗಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.
ಯಾವಾಗಲೂ ಮೋದಿ ಹಿಂದೂ-ಮುಸ್ಲಿಂ ಎಂದು ಜಪಿಸುತ್ತಿರುತ್ತಾರೆ. ಹಿಂದೂ ಮತ್ತು ಮುಸ್ಲಿಮರು ಒಗ್ಗಟ್ಟಾಗಿ ಮತ ಚಲಾಯಿಸಬೇಕು ಎಂದು ತಾನು ಮನವಿ ಮಾಡಿದ್ದೆ. ಇನ್ನು ಹತ್ತು ನೋಟೀಸು ಬಂದರೂ ತಾನು ಒಗ್ಗಟ್ಟಾಗಿ ಮತ ಚಲಾಯಿಸಲು ಮತದಾರರಿಗೆ ಒತ್ತಾಯಿಸುತ್ತೇನೆ. ತೃಣಮೂಲಕ್ಕೆ ಮತ ಚಲಾಯಿಸುವುದು ಮಿನಿ ಪಾಕಿಸ್ತಾನಕ್ಕೆ ಮತ ಹಾಕಿದಂತೆಯೇ ಎಂದು ನಂದಿ ಗ್ರಾಮದಲ್ಲಿ ಭಾಷಣ ಮಾಡಿದವರು ಇದ್ದಾರೆ. “ಯಾರೂ ಇಂತಹಾ ಹೇಳಿಕೆಗಳಿಗೆ ನಾಚಿಕೆಪಡುವುದಿಲ್ಲವೇ?” ಎಂದು ಅವರು ಕೇಳಿದರು.
ಪ್ರಚಾರದ ವೇಳೆ ಬಿಜೆಪಿ ಮುಖಂಡ ಮತ್ತು ಮಮತಾ ಬ್ಯಾನರ್ಜಿಯ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ಪಾಕಿಸ್ತಾನದ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ತಾನು ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಸಿಖ್ಖರ ಪರವಾಗಿ ನಿಂತಿದ್ದೇನೆ ಎಂದು ಮಮತಾ ಹೇಳಿದರು.