ಬಿಬಿಸಿ ನಿಷೇಧ ಕೋರಿ ಸುಪ್ರೀಂ ಮೊರೆ ಹೋದ ಹಿಂದೂ ಸೇನಾ ಅಧ್ಯಕ್ಷ: ಕಾಂಗ್ರೆಸ್ 1970ರಲ್ಲಿ ಹೇರಿದ್ದ ನಿಷೇಧ ಪ್ರಸ್ತಾಪ

Prasthutha|

ನವದೆಹಲಿ: ಎರಡು ದಶಕಗಳ ಹಿಂದೆ ನಡೆದಿದ್ದ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ‘ಇಂಡಿಯಾ: ದ ಮೋದಿ ಕ್ವೆಶ್ಚನ್ʼ ಹೆಸರಿನ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದಕ್ಕಾಗಿ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಅನ್ನು ಸಂಪೂರ್ಣ ನಿಷೇಧಿಸುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

- Advertisement -


ಗಲಭೆಯಲ್ಲಿ ಅಂದಿನ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪ್ರಸಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾತ್ರವನ್ನು ಸಾಕ್ಷ್ಯಚಿತ್ರ ವಿಶ್ಲೇಷಿಸಿದೆ.
ದೇಶದ ವಿವಿಧ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿರುವಂತೆಯೇ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಮತ್ತು ಆನ್’ಲೈನ್’ನಲ್ಲಿ ಅದನ್ನು ನಿಷೇಧಿಸಿದೆ.
ಬಲಪಂಥೀಯ ಸಂಘಟನೆಯಾದ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಮತ್ತು ರೈತ ಬೀರೇಂದ್ರ ಕುಮಾರ್ ಸಿಂಗ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಸಾಕ್ಷ್ಯಚಿತ್ರವನ್ನು ಭಾರತ ವಿರೋಧಿ ಎಂದು ಕರೆಯಲಾಗಿದ್ದು ಅದನ್ನು ಸಂಪೂರ್ಣ ನಿಷೇಧಿಸಿರುವಂತೆ ಕೋರಿರುವುದಲ್ಲದೆ ಸಾಕ್ಷ್ಯಚಿತ್ರ ನಿರ್ಮಿಸಿದ ಬಿಬಿಸಿ ವಿರುದ್ಧ ತನಿಖೆ ನಡೆಸುವಂತೆಯೂ ಕೋರಿದ್ದಾರೆ.


ಅರ್ಜಿಯ ಪ್ರಮುಖಾಂಶಗಳು
2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಒಟ್ಟಾರೆ ಬೆಳವಣಿಗೆ ವೇಗ ಪಡೆದುಕೊಂಡಿರುವುದನ್ನು ಭಾರತ ವಿರೋಧಿ ಲಾಬಿಕೋರರು, ಮಾಧ್ಯಮಗಳು ಅದರಲ್ಲಿಯೂ ಬಿಬಿಸಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಬಿಸಿ ಭಾರತ ಮತ್ತು ಭಾರತ ಸರ್ಕಾರದ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ.

- Advertisement -


ಗುಜರಾತ್ ಗಲಭೆಗಳಲ್ಲಿ ಗುಜರಾತ್ ಸರ್ಕಾರದ ಅಂದಿನ ಸಚಿವರ ಪಾತ್ರ ಇರಲಿಲ್ಲ ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಪ್ರಧಾನಿಯವರನ್ನು ಅಪರಾಧಿ ಎಂಬಂತೆ ಬಿಬಿಸಿ ಬಿಂಬಿಸಿದೆ.
ಗುಜರಾತ್ ಹಿಂಸಾಚಾರದ ಕುರಿತಂತೆ ನಾನಾವತಿ ಆಯೋಗದ ವರದಿ ಕೂಡ ಘಟನೆಯಲ್ಲಿ ಸಚಿವರ ಪಾತ್ರ ಇರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎನ್ನುತ್ತದೆ.
ಆದ್ದರಿಂದ, ಪ್ರಧಾನಿ ಮೋದಿ ಅವರನ್ನು ಒಳಗೊಂಡ ಸಾಕ್ಷ್ಯಚಿತ್ರ ಅವರ ವಿರುದ್ಧ ನಡೆಯುತ್ತಿರುವ ಪ್ರಚಾರವನ್ನು ಬಿಂಬಿಸುತ್ತದೆ. ಅಷ್ಟೇ ಅಲ್ಲದೆ ಭಾರತದ ಸಾಮಾಜಿಕ ವ್ಯವಸ್ಥೆಯನ್ನು ನಾಶ ಮಾಡುವುದಕ್ಕಾಗಿ ಬಿಬಿಸಿ ಹಿಂದೂ ವಿರೋಧಿ ಪ್ರಚಾರಾಂದೋಲನ ನಡೆಸುತ್ತಿದೆ.
ಭಾರತ ಸ್ವಾತಂತ್ರ್ಯ ಪಡೆದ ಕಾಲದಿಂದಲೂ ಬಿಬಿಸಿ ಭಾರತ ವಿರೋಧಿ ನಿಲುವು ತಳೆದಿದೆ.

ಭಾರತ ವಿರೋಧಿ ವರದಿ ಮಾಡಿದ್ದಕ್ಕಾಗಿ ಬಿಬಿಸಿಗೆ 1970ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಎರಡು ವರ್ಷಗಳ ಕಾಲ ನಿಷೇಧ ವಿಧಿಸಿತ್ತು. ಬಿಬಿಸಿಯ ಬ್ರಿಟಿಷ್ ಉದ್ಯೋಗಿಗಳು ದೇಶ ತೊರೆಯಬೇಕೆಂದ ಸೂಚಿಸಿತ್ತು. ಅಲ್ಲದೆ ಬಿಬಿಸಿ ಉದ್ಯೋಗ ತೊರೆಯುವಂತೆ ಭಾರತೀಯರನ್ನು ಕೋರಲಾಗಿತ್ತು.


ಕಾಂಗ್ರೆಸ್ ಪಕ್ಷಕ್ಕೆ ಸೇರಿದ 41 ಸಂಸದರು 1975ರಲ್ಲಿ ʼಬಿಬಿಸಿ ಭಾರತ ವಿರೋಧಿ ವರದಿಗಳನ್ನು ಪ್ರಸಾರ ಮಾಡುತ್ತಿದ್ದು ಅದು ದೇಶದಲ್ಲಿ ವರದಿ ಮಾಡಲು ಅನುಮತಿ ನೀಡದಂತೆ ಸರ್ಕಾರಕ್ಕೆ ವಿನಂತಿಸಿದ್ದರು.
ಬಿಬಿಸಿ ನಿಷೇಧಿಸುವಂತೆ ನಾನು ಕೂಡ (ಅರ್ಜಿದಾರರು) ಕಳೆದ ಜನವರಿ 27ರಂದು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೆ. ಆದರೆ ಈವರೆಗೆ ಅದು ಯಾವುದೇ ಕ್ರಮ ಕೈಗೊಂಡಿಲ್ಲ.
ಸಂವಿಧಾನದ 19 (1) (ಎ) ವಿಧಿಯಡಿ ಒದಗಿಸುವ ವಾಕ್ ಸ್ವಾತಂತ್ರ್ಯದ ಹಕ್ಕು ಪರಿಪೂರ್ಣ ಹಕ್ಕಾಗಿರದೆ 19 (2) ವಿಧಿಯಿಂದ ಅರ್ಹತೆ ಪಡೆದಿದೆ.
(ಕೃಪೆ: ಬಾರ್ & ಬೆಂಚ್)

Join Whatsapp