ಕಾನ್ಪುರ: ಮುಸ್ಲಿಮ್ ವ್ಯಕ್ತಿ ಸೇರಿದಂತೆ ಜೋಡಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ್ ಮಂಚ್ ನ ಸ್ಥಳೀಯ ಮುಖಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದುಷ್ಕರ್ಮಿಗಳ ಗುಂಪೊಂದು ಮೀರತ್ ನ ಗೋಲ್ ಮಾರ್ಕೆಟ್ ನಲ್ಲಿ ಯುವತಿಯನ್ನು ವ್ಯಕ್ತಿಯೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆಯುವಂತೆ ಬಲವಂತಪಡಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಿಂದೂ ಜಾಗರಣ್ ಮಂಚ್ ನ ಸ್ಥಳೀಯ ಮುಖಂಡ ಸಚಿನ್ ಸಿರೋಹಿ ಮತ್ತು ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಮಧ್ಯೆ ಹಲ್ಲೆಗೊಳಗಾದ ಯುವಕ ಮತ್ತು ಯುವತಿಯನ್ನು ಠಾಣೆಗೆ ಕರೆಯಿಸಿ ಪೊಲೀಸರು ವಿಚಾರಣೆ ನಡೆಸಿದಾಗ, ಆತ ತನ್ನ ಸ್ನೇಹಿತ ಎಂದು ಮಾಹಿತಿ ನೀಡಿದ್ದಳು. ಘಟನೆಯ ವಾಸ್ತವವನ್ನು ಅರಿಯಲು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸುವುದಾಗಿ ಎಸ್.ಎಸ್.ಪಿ ಅಧಿಕಾರಿ ಪ್ರಭಾಕರ್ ಚೌಧರಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 323, 147, ಮತ್ತು 109 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.