ಶೇ.3ಕ್ಕಿಂತಲೂ ಕಡಿಮೆ ಜನ ಮಾತನಾಡುವ ಹಿಂದಿ ಇನ್ನು ಕಾಶ್ಮೀರದ ಅಧಿಕೃತ ಭಾಷೆ : ಮಸೂದೆ ಅಂಗೀಕರಿಸಿದ ಲೋಕಸಭೆ

Prasthutha|

“ಉರ್ದು ಸೇರಿದಂತೆ ಇತರ ಭಾಷೆಗಳನ್ನು ನಿರ್ಲಕ್ಷಿಸಿದ್ದು ದುರುದ್ದೇಶಪೂರಿತ ಕ್ರಮ”

- Advertisement -

ಶೇ.3ರಕ್ಕಿಂತಲೂ ಕಡಿಮೆ ಜನ ಮಾತನಾಡುವ ಹಿಂದಿ ಸೇರಿದಂತೆ ಇನ್ನೂ ಮೂರು ಭಾಷೆಗಳನ್ನು ಜಮ್ಮು ಕಾಶ್ಮೀರದ ಅಧಿಕೃತ ಭಾಷೆಯನ್ನಾಗಿ ಮಾಡುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ.

ಹಿಂದಿ, ಕಾಶ್ಮೀರಿ ಮತ್ತು ಡೋಗ್ರಿ ಭಾಷೆಗಳಿಗೆ ಅಧಿಕೃತ ಸ್ಥಾನಮಾನವನ್ನು ನೀಡುವ ಜಮ್ಮು ಆ್ಯಂಡ್ ಕಾಶ್ಮೀರ್ ಓಫೀಷಿಯಲ್ ಲಾಂಗ್ವೇಜ್ ಬಿಲ್ 2020ಯನ್ನು ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ಪ್ರಸ್ತುತಪಡಿಸಿದ್ದಾರೆ.

- Advertisement -

ಪ್ರಸ್ತುತ ಉರ್ದು ಮತ್ತು ಇಂಗ್ಲಿಷ್ ಕಾಶ್ಮೀರದ ಅಧಿಕೃತ ಭಾಷೆಗಳಾಗಿವೆ. ಕಾಶ್ಮೀರಿ ಭಾಷೆಯನ್ನು ಶೇ.53.26 ರಷ್ಟು ಜನರು ಮಾತನಾಡುತ್ತಾರೆ. ಆದರೆ 70 ವರ್ಷಗಳಿಂದ ಅದು ಅಧಿಕೃತವಾಗಿ ಮಾನ್ಯತೆ ಪಡೆದಿಲ್ಲ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ. ಜನರ ಕೋರಿಕೆಯ ಮೇರೆಗೆ ಲೆ.ಗವರ್ನರ್ ತಿಳಿಸಿದ್ದರಿಂದ ಕಾಶ್ಮೀರಿ, ಹಿಂದಿ ಮತ್ತು  ಡೋಗ್ರಿಗಳನ್ನು ಕಾಶ್ಮೀರದ ಅಧಿಕೃತ ಭಾಷೆಗಳನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಹಸ್ನೈನ್ ಮಸೂದ್, ಕೇಂದ್ರ ಸರಕಾರವು ಕಾಶ್ಮೀರಕ್ಕೆ ಐದು ಅಧಿಕೃತ ಭಾಷೆಗಳನ್ನು ರಚಿಸುವ ಮೂಲಕ ಗೊಂದಲವನ್ನು ಸೃಷ್ಟಿಸುತ್ತಿದೆ. ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಐದು ಅಧಿಕೃತ ಭಾಷೆಗಳಿವೆಯೇ? ಉರ್ದು ಕಾಶ್ಮೀರದ ಅವಿಭಾಜ್ಯ ಭಾಷೆಯಾಗಿದೆ ಎಂದರು.

ಅದೇ ಸಮಯದಲ್ಲಿ ಕಾಶ್ಮೀರದ ಜನಸಂಖ್ಯೆಯ ಶೇ.3ಕ್ಕಿಂತ ಕಡಿಮೆ ಜನರು ಮಾತನಾಡುವ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವಾಗ, ವ್ಯಾಪಕವಾಗಿ ಬಳಸಲಾಗುವ ಗೋಜ್ರಿ, ಪಹಡಿ ಮತ್ತು ಪಂಜಾಬಿ ಭಾಷೆಗಳನ್ನು ಏಕೆ ಕೈ ಬಿಡಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಜಮ್ಮು ಕಾಶ್ಮೀರ ರಾಜ್ಯವಾಗಿದ್ದಾಗ ಗೋಜ್ರಿ ಮತ್ತು ಪಹಾಡಿಯನ್ನು ಸ್ಥಳೀಯ ಭಾಷೆಯಾಗಿ ಗುರುತಿಸಲಾಗಿತ್ತು.

ಹೊಸ ಅಧಿಕೃತ ಭಾಷೆಗಳ ಆಗಮನದೊಂದಿಗೆ, ಬುಡಕಟ್ಟು ಗುಜ್ಜರ್ ಮತ್ತು ಬಕರ್ವಾಲ್ ಸಮುದಾಯಗಳು ಬಳಸುವ ಗೋಜ್ರಿ ಭಾಷೆ ಅದರ ಮಹತ್ವವನ್ನು ಕಳೆದುಕೊಳ್ಳುತ್ತದೆ. ಪರ್ವತ ಪ್ರದೇಶಗಳಲ್ಲಿ ಹತ್ತು ಲಕ್ಷ ಜನರು ಮಾತನಾಡುವ ಪಹಾಡಿಯನ್ನೂ ಕೂಡಾ ನಿರ್ಲಕ್ಷಿಸಲಾಗುತ್ತಿದೆ. ಕಾಶ್ಮೀರದಲ್ಲಿ ಸಿಖ್ ಸಮುದಾಯವು ಬಳಸುವ ಪಂಜಾಬಿಯನ್ನು ಹೊರಗಿಡುವ ಕೇಂದ್ರ ಸರಕಾರದ ನಡೆಯಲ್ಲಿ ದುರುದ್ದೇಶವಿದೆ ಎಂದು ಹಸ್ನೈನ್ ಮಸೂದ್ ಹೇಳಿದ್ದಾರೆ.

Join Whatsapp