ಬಿಜೆಪಿ ಪರ ವಹಿಸಿದ್ದ ಬಿಹಾರ ಡಿಜಿಪಿ ರಾಜೀನಾಮೆ : ಚುನಾವಣೆಯಲ್ಲಿ ಕಮಲ ಪಕ್ಷದಿಂದ ಸ್ಪರ್ಧೆ!

Prasthutha|

ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಎದುರಿಸುತ್ತಿರುವ ಅಧಿಕಾರಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವನ್ನು ರಾಜಕೀಯಗೊಳಿಸಲು ಬಿಜೆಪಿಗೆ ಸಹಾಯ ಮಾಡಿ ಟೀಕೆಗೆ ಗುರಿಯಾಗಿದ್ದ ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ ಇದೀಗ ವಿಧಾನ ಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.

- Advertisement -

ಸ್ವಯಂ ನಿವೃತ್ತಿಪಡೆದುಕೊಂಡು ರಾಜೀನಾಮೆ ನೀಡಿದ ಗುಪ್ತೇಶ್ವರ್ ಪಾಂಡೆಯವರ ನಿರ್ಧಾರವನ್ನು ಬಿಹಾರ ಸರಕಾರ ಅನುಮೋದಿಸಿದೆ. ಸೆಪ್ಟೆಂಬರ್ 22ರಂದು ಬಿಹಾರ ಗೃಹ ಸಚಿವಾಲಯವು ಪಾಂಡೆಯವರ ನಿವೃತ್ತಿಯನ್ನು ಅಂಗೀಕರಿಸುವ ಆದೇಶವನ್ನು ಹೊರಡಿಸಿತು. 2021 ರವರೆಗೆ ಅಧಿಕಾರದಲ್ಲಿರಬೇಕಾಗಿದ್ದ ಪಾಂಡೆ ವಿಧಾನಸಭೆ ಚುನಾವಣೆಗೆ ಮುನ್ನ ರಾಜಕೀಯ ಪ್ರವೇಶಿಸಲು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಪಾಂಡೆಯವರು ಬಕ್ಸಾರ್ ಅಥವಾ ಶಹಾಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಾಂಡೆ ಸ್ವಯಂ ಸೇವಾ ನಿವೃತ್ತಿ (ವಿ.ಆರ್.ಎಸ್.) ಪಡೆದಿದ್ದರೂ ಟಿಕೆಟ್ ಗಳಿಸಲು ವಿಫಲವಾದ ಕಾರಣ ಮತ್ತೆ ಸೇವೆಗೆ ಪ್ರವೇಶಿಸಿದ್ದರು.

2012ರಲ್ಲಿ ಬಿಹಾರದ ಮುಝಪ್ಫರ್ ಪುರದಿಂದ 12 ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೆ ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ. ಮುಝಪ್ಫರ್ ಪುರದ ಪಟ್ಟಣದ ಮುಖ್ಯ ಭಾಗದಲ್ಲಿ ತನ್ನ ಮಗಳನ್ನು ಭೂ ಮಾಫಿಯಾಗಳ ಪಿತೂರಿಯ ಭಾಗವಾಗಿ ಅಪಹರಿಸಲಾಗಿದೆ ಎಂದು ಬಾಲಕಿಯ ತಂದೆ ಆರೋಪಿಸಿದ್ದರು. ಸಿಬಿಐ ಪ್ರಸ್ತುತ ಸುಪ್ರೀಂ ಕೋರ್ಟಿನ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಳಿಸಲು ನ್ಯಾಯಾಲಯ ಈಗಾಗಲೇ 10 ಬಾರಿ ಸಮಯ ನೀಡಿದೆ.

- Advertisement -