ಹಿಂದಿ ಹೇರಿಕೆ ಹಿಂದಿರುವ ಹುನ್ನಾರಗಳೇನು?

Prasthutha: November 1, 2021
✍️-ಅರುಣ್ ಜಾವಗಲ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ

►ಕನ್ನಡದ ಮೇಲೆ ಹಿಂದಿ ಭೂತ

ಭಾರತದ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ ವೈವಿಧ್ಯತೆ ಅನನ್ಯವಾದದ್ದು. ಇತರ ದೇಶಗಳೊಂದಿಗೆ ಭಾರತವನ್ನು ಹೋಲಿಸಲಾಗದು. ವಿವಿಧತೆಯಲ್ಲಿ ಏಕತೆ ಎಂಬುದು ಸ್ವಾತಂತ್ರ್ಯ ಚಳವಳಿಗೂ ಹಿಂದಿನ ಘೋಷವಾಕ್ಯವಾಗಿತ್ತು. ಎಲ್ಲ ಭಾಷಿಕ ಸಮುದಾಯಗಳೂ ತಮ್ಮ ವೈವಿಧ್ಯತೆಯನ್ನು ಉಳಿಸಿಕೊಂಡೇ ಈ ದೇಶ ಒಂದಾಗಿ ಉಳಿಯಲು ಸಹಕರಿಸಿದ್ದರು. ಬ್ರಿಟಿಷರ ಆಳ್ವಿಕೆಗೂ ಮುನ್ನ ಸಾವಿರಾರು ದೊರೆಗಳ, ಸಾಮಂತರ ಅಡಿಯಲ್ಲಿ ಛಿದ್ರವಾಗಿದ್ದ ಭೂಭಾಗಗಳೆಲ್ಲ ಒಂದಾಗಿಯೇ ದೇಶ ನಿರ್ಮಾಣವಾಗಿದೆ. ಇಂಥ ವೈವಿಧ್ಯತೆಯ ನೆಲದಲ್ಲಿ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವುದು ಕ್ರೌರ್ಯ ಮತ್ತು ರಾಜಕೀಯ ದಾದಾಗಿರಿ, ಸಾಂಸ್ಕೃತಿಕ ಭಯೋತ್ಪಾದನೆಯ ಲಕ್ಷಣ. ಅದು ಯಾವ ಕಾಲಕ್ಕೂ ಆಗ ಕೂಡದು. ಈ ಥರದ ರಾಜಕೀಯ ದಾದಾಗಿರಿ ನಡೆದಾಗಲೆಲ್ಲ ಜನರು ಸಿಡಿದೆದ್ದು ಪ್ರತಿಭಟಿಸಿದ್ದಾರೆ. ಜನರು ತಾವಾಡುವ ನುಡಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಅವರ ನುಡಿಗೆ ಹೊರತಾದ ಇನ್ಯಾವುದೋ ಅಪರಿಚಿತ ಭಾಷೆಯನ್ನೇ ನೀವು ಆಡಬೇಕು, ಬಳಸಬೇಕು ಎಂಬ ಫರ್ಮಾನು ಹೊರಡಿಸಿದರೆ ಆ ಭಾಷಾ ಸಮುದಾಯ ಬಂಡಾಯವೇಳುತ್ತದೆ.


ತುಂಬಾ ದೂರದ ಉದಾಹರಣೆಗಳು ಬೇಡ. ನಮ್ಮ ಪಾಕಿಸ್ತಾನದ ಬಾಂಗ್ಲಾದೇಶ ಯಾಕೆ ಪಾಕಿಸ್ತಾನದಿಂದ ಪ್ರತ್ಯೇಕಗೊಂಡಿತು? ಎರಡೂ ದೇಶಗಳೂ ಒಂದೇ ಧರ್ಮದ ನೆಲೆಯನ್ನು ಹೊಂದಿದ್ದವು. ಹಾಗಿದ್ದಾಗ್ಯೂ ಪೂರ್ವ ಪಾಕಿಸ್ತಾನ ಎಂದು ಕರೆಯಲ್ಪಡುತ್ತಿದ್ದ ಬಾಂಗ್ಲಾದೇಶದ ವಿಮೋಚನಾ ಚಳವಳಿ ಯಾಕೆ ಆರಂಭವಾಯಿತು? ಬಾಂಗ್ಲಾದೇಶದ ಮುಸ್ಲಿಮರು ಬೆಂಗಾಳಿ ಭಾಷೆಯನ್ನು ತಾಯ್ನುಡಿಯನ್ನಾಗಿ ಹೊಂದಿದವರು. ಆದರೆ ಪಶ್ಚಿಮ ಪಾಕಿಸ್ತಾನದ ಪ್ರಭುಗಳು ಬಲವಂತವಾಗಿ ಬಾಂಗ್ಲಾದೇಶೀಯರ ಮೇಲೆ ಉರ್ದು ಭಾಷೆಯನ್ನು ಹೇರಲು ಪ್ರಯತ್ನಿಸಿದರು. ಇದನ್ನು ವಿರೋಧಿಸಿ ಇಡೀ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಆರಂಭಗೊಂಡವು. 1952ರ ಫೆಬ್ರವರಿ 21ರಂದು ಉರ್ದು ಹೇರಿಕೆ ಖಂಡಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿ 21 ಮಂದಿಯನ್ನು ಕೊಂದರು. ಭಾಷಾ ಚಳವಳಿಯೇ ಪ್ರತ್ಯೇಕ ರಾಷ್ಟ್ರ ಚಳವಳಿಯಾಗಿ ಬದಲಾಯಿತು. ಸುಮಾರು ಒಂಭತ್ತು ವರ್ಷಗಳ ವಿಮೋಚನಾ ಹೋರಾಟದ ನಂತರ ಭಾರತದ ಬೆಂಬಲದೊಂದಿಗೆ ಬಾಂಗ್ಲಾದೇಶ ವಿಮೋಚನೆಗೊಂಡಿತು. ವಿಶೇಷವೆಂದರೆ ಬಾಂಗ್ಲಾದಲ್ಲಿ ಗೋಲಿಬಾರ್ ನಡೆದ ಫೆ.21ರ ದಿನವನ್ನು ವಿಶ್ವಸಂಸ್ಥೆ ‘ವಿಶ್ವ ತಾಯ್ನುಡಿ ದಿನ’ವನ್ನಾಗಿ ಘೋಷಿಸಿತು.


ಭಾರತ ಒಂದು ಒಕ್ಕೂಟ ರಾಷ್ಟ್ರ. ಯೂನಿಯನ್ ಆಫ್ ಸ್ಟೇಟ್ಸ್. ಬ್ರಿಟಿಷ್ ವಸಾಹತುಶಾಹಿ ಆಡಳಿತ ಕೊನೆಗೊಂಡ ನಂತರ ಬೇರೆ ಬೇರೆ ಪ್ರಾಂತ್ಯಗಳಾಗಿ ಗುರುತಿಸಿಕೊಂಡಿದ್ದ ಭೂಭಾಗಗಳೆಲ್ಲ ಒಂದಾಗಿ ಭಾರತ ಒಕ್ಕೂಟ ನಿರ್ಮಾಣವಾಗಿದೆ. ಒಂದು ಒಕ್ಕೂಟವಾಗಿ ಎಲ್ಲ ಪ್ರಾಂತ್ಯಗಳ ಭಾಷೆ, ಸಂಸ್ಕೃತಿ, ಇತಿಹಾಸ, ಆಚಾರ-ವಿಚಾರಗಳನ್ನು ಗೌರವಿಸುವ ಹೊಣೆ ಒಕ್ಕೂಟದ್ದಾಗಿದೆ. ವಿವಿಧತೆಯಲ್ಲಿ ಏಕತೆ ಎಂಬುದು ಒಕ್ಕೂಟದ ಮೂಲಮಂತ್ರ. ಆದರೆ ಈ ಒಗ್ಗಟ್ಟನ್ನು ಮುರಿಯುವ ಕೆಲಸವನ್ನು ಹಿಂದಿ ಸಾಮ್ರಾಜ್ಯಶಾಹಿಗಳು ನಿರಂತರವಾಗಿ ನಡೆಸುತ್ತಲೇ ಇದ್ದಾರೆ.


ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ರಾಷ್ಟ್ರ ಭಾಷೆಗಳೇ ಆಗಿವೆ. ಈ ಪರಿಚ್ಛೇದದಲ್ಲಿ ಒಳಗೊಳ್ಳದ ನೂರಾರು ಜೀವಂತ ಭಾಷೆಗಳೂ ನಮ್ಮ ನಡುವೆ ಇವೆ. ಈ ಎಲ್ಲ ಭಾಷೆಗಳೂ ಉಳಿದು, ಬೆಳೆಯುವ ಎಲ್ಲ ಹಕ್ಕನ್ನೂ ಒಳಗೊಂಡಿವೆ. ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡುವ ಪ್ರಸ್ತಾಪವನ್ನು ಸಂವಿಧಾನ ಕರಡು ರಚನೆಯ ಸಂದರ್ಭದಲ್ಲೇ ತಿರಸ್ಕರಿಸಲಾಗಿದೆ. ಹಿಂದಿಯೂ ಕನ್ನಡದ ಹಾಗೆಯೇ ಒಂದು ಭಾಷೆ, ಅದಕ್ಕೆ ಯಾವ ಹೆಚ್ಚುಗಾರಿಕೆಯೂ ಇಲ್ಲ, ಇರಬೇಕಾಗೂ ಇಲ್ಲ. ಕೇಂದ್ರ ಸರ್ಕಾರ ತನ್ನ ಆಡಳಿತಕ್ಕಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಬಳಸಿಕೊಳ್ಳುತ್ತಿದೆ. ಇಂಗ್ಲಿಷನ್ನು ಬಿಟ್ಟು ಕೇವಲ ಹಿಂದಿಯನ್ನು ಮಾತ್ರ ಆಡಳಿತ ಭಾಷೆಯನ್ನಾಗಿ ಮಾಡಿಕೊಳ್ಳುವ ಹುನ್ನಾರವನ್ನು ಅರವತ್ತರ ದಶಕದ ಹಿಂದಿ ವಿರೋಧಿ ಹೋರಾಟ ವಿಫಲಗೊಳಿಸಿದೆ. ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಇಂಗ್ಲಿಷ ನ್ನೂ ಸಹ ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಉಳಿಸಬೇಕೆಂದು ಒತ್ತಡ ಹೇರಿದ್ದರಿಂದಾಗಿ ಇಂಗ್ಲಿಷ್-ಹಿಂದಿ ಎರಡೂ ಭಾಷೆಗಳೂ ಆಡಳಿತ ಭಾಷೆಗಳಾಗಿ ಉಳಿದುಕೊಂಡಿವೆ. ಒಂದು ವೇಳೆ ಈ ಹೋರಾಟ ನಡೆಯದೇ ಹೋಗಿದ್ದರೆ ಹಿಂದಿ ಬಳಸದ ರಾಜ್ಯಗಳ ಜನರು ಮೂರನೇ ದರ್ಜೆ ಪ್ರಜೆಗಳಾಗಿ ಉಳಿದುಕೊಳ್ಳಬೇಕಿತ್ತು.


ರಾಜಭಾಷಾ ಕಾಯ್ದೆಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಹಿಂದಿಯನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಿಂದಿಯೇತರ ರಾಜ್ಯಗಳ ಮೇಲೆ ಹೇರುವ ಕಾರ್ಯವನ್ನು ಮಾಡುತ್ತ ಬಂದಿದೆ. ಹಿಂದಿ ರಾಜ್ಯಗಳ ಜನರನ್ನು ಉದ್ಯೋಗದ ನೆಪದಲ್ಲಿ ಹಿಂದಿಯೇತರ ರಾಜ್ಯಗಳಿಗೆ ವಲಸೆ ಕಳುಹಿಸುವ ಮತ್ತು ವಲಸೆ ಹೋದ ಹಿಂದಿಯನ್ನರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಹಿಂದೀ ಭಾಷಿಕರು ಹಿಂದಿಯೇತರ ಪ್ರದೇಶಗಳಿಗೆ ವರ್ಗವಾಗಲು ಒಪ್ಪಿದರೆ ಅವರಿಗೆ ಹೆಚ್ಚಿನ ಭತ್ಯೆ ನೀಡುವಂತೆ ಸಂಸತ್ ಸಮಿತಿ ಶಿಫಾರಸು ಮಾಡಿದೆ. ಇಂಥ ಕುತಂತ್ರಗಳಿಂದಲೇ ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಗಂಟಲಿಗೆ ತುರುಕಲಾಗುತ್ತಿದೆ. ದೂರದರ್ಶನ ಆರಂಭವಾದ ಕಾಲಘಟ್ಟದಲ್ಲಿ ಕೇವಲ ನೆಪಕ್ಕೆ ಮಾತ್ರ ಒಂದೆರಡು ಗಂಟೆಗಳ ಪ್ರಾದೇಶಿಕ ಭಾಷಾ ಕಾರ್ಯಕ್ರಮಗಳನ್ನು ನೀಡಿ, ಸಂಪೂರ್ಣ ಹಿಂದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಹಿಂದಿಯನ್ನು ಪರೋಕ್ಷವಾಗಿ ಹೇರಿದ್ದನ್ನು ಮರೆಯುವಂತಿಲ್ಲ.


ಕೇಂದ್ರ ಸರ್ಕಾರದ ಅಡಿಯಲ್ಲಿನ ಉದ್ಯಮಗಳು, ರೈಲ್ವೆ ಇಲಾಖೆ, ಬ್ಯಾಂಕಿಂಗ್ ವಲಯ ಹಾಗು ಸೇನಾ ನೇಮಕಾತಿಗಳ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ಆಡುವ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ. ಹಿಂದಿಯನ್ನು ಮಾತೃ ಭಾಷೆಯನ್ನಾಗಿ ಹೊಂದಿದವರು ಎಲ್ಲ ಅವಕಾಶಗಳನ್ನು ಆಕ್ರಮಣಕಾರಿಯಾಗಿ, ಅನೈತಿಕವಾಗಿ ಪಡೆದುಕೊಳ್ಳುತ್ತಿದ್ದರೆ, ಹಿಂದಿಯೇತರ ಭಾಷಿಕ ಯುವ ಸಮುದಾಯ ಉದ್ಯೋಗ ಮತ್ತು ಇತರ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಪಾಕ್ಷಿಕ ಇತ್ಯಾದಿ ಕಾರ್ಯಕ್ರಮಗಳನ್ನು ನಮ್ಮ ತೆರಿಗೆ ಹಣದಲ್ಲಿ ಸಂಘಟಿಸಿ, ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳಲ್ಲಿ ಪಸರಿಸುವ ಕೆಲಸಕ್ಕೆ ಬಳಸುತ್ತಿದೆ. ಹಿಂದಿ ದಿವಸ್ ಗಳಲ್ಲಿ ಭಾಗವಹಿಸುವ ನೌಕರರಿಗೆ ಅವರ ಕುಟುಂಬದವರಿಗೆ ಸಾವಿರಾರು ರುಪಾಯಿಗಳ ಬಹುಮಾನಗಳನ್ನು ಕೊಡಲಾಗುತ್ತದೆ. ಇದೇ ಕೇಂದ್ರ ಸರ್ಕಾರ ಕನ್ನಡ ದಿವಸ, ತಮಿಳು ದಿವಸ, ಮಲಯಾಳಂ ದಿವಸ, ಬಂಗಾಲಿ ದಿವಸಗಳನ್ನು ಎಂದೂ ಆಚರಿಸಿಲ್ಲ. ಇದರ ಹುನ್ನಾರವೇನು? ಹಿಂದಿಯೊಂದೇ ಈ ದೇಶದ ಭಾಷೆಯೇ? ಇತರ ಭಾಷೆಗಳು ಬೇರೆ ಜಗತ್ತಿನ ಭಾಷೆಗಳೇ? ಯಾಕೀ ತಾರತಮ್ಯ? ಕೇಂದ್ರ ಸರ್ಕಾರವೆಂದರೆ ಹಿಂದೀ ಸರ್ಕಾರವೇ? ಕೇಂದ್ರ ಸರ್ಕಾರದಲ್ಲಿ ಹಿಂದಿಯೇತರ ಭಾಷಿಕರ ಪಾಲು ಇಲ್ಲವೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಹಿಂದಿಯನ್ನು ಕೇಂದ್ರ ಸರ್ಕಾರ ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿರುವ ಪರಿಣಾಮವಾಗಿ ಹಿಂದಿಯೇತರ ರಾಜ್ಯಗಳ ಜನರು ದ್ವಿತೀಯ ದರ್ಜೆ ಪ್ರಜೆಗಳಾಗಿ ಬದುಕಬೇಕಾಗಿ ಬಂದಿದೆ. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಹಿಂದಿಯಲ್ಲೇ ಸಂದರ್ಶನಗಳು ನಡೆಯುತ್ತಿವೆ. ಹಿಂದಿಯ ಒಂದಕ್ಷರವೂ ಬಾರದವರು ಹಿಂದಿಯಲ್ಲೇ ಪ್ರಮಾಣಪತ್ರಗಳನ್ನು ನೀಡಬೇಕು, ಹಿಂದಿಯಲ್ಲೇ ಅರ್ಜಿಗಳನ್ನು ಭರ್ತಿ ಮಾಡಬೇಕು ಎಂಬ ನಿಯಮಗಳಿವೆ. ಇದರಿಂದಾಗಿ ಹಿಂದಿಯೇತರರು ಭಾರೀ ಪ್ರಮಾಣದ ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ಕರ್ನಾಟಕಕ್ಕೆ ವಲಸೆ ಬಂದ ಹಿಂದಿ ಭಾಷಿಕನಿಗೆ ಇಲ್ಲಿನ ರೈಲುಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಅಂಚೆ ಕಚೇರಿ-ಪಾಸ್ ಪೋರ್ಟ್ ಕಚೇರಿಗಳಲ್ಲಿ, ಕೇಂದ್ರ ಸರ್ಕಾರದ ಎಲ್ಲ ವ್ಯವಸ್ಥೆಗಳಲ್ಲಿ ಹಿಂದಿಯಲ್ಲೇ ಸೇವೆ ಸಿಗುತ್ತದೆ. ಆದರೆ ಒಬ್ಬ ಕನ್ನಡಿಗ ಹಿಂದಿ ರಾಜ್ಯಗಳಿಗೆ ವಲಸೆ ಹೋದರೆ ಅಲ್ಲಿ ಕನ್ನಡದಲ್ಲಿ ಯಾವುದೇ ರೀತಿಯ ಸೇವೆಗಳೂ ಸಿಗುವುದಿಲ್ಲ. ಹಿಂದಿ ವಲಸಿಗರು ಕರ್ನಾಟಕದ ಜನರೊಂದಿಗೆ ಸುಲಭವಾಗಿ ತಮ್ಮ ಭಾಷೆಯಲ್ಲೇ ವ್ಯವಹರಿಸಲು ಅನುಕೂಲ ಮಾಡಿಕೊಡಲು ಕನ್ನಡಿಗರಿಗೆ ಕಡ್ಡಾಯವಾಗಿ ತೃತೀಯ ಭಾಷೆಯನ್ನಾಗಿ ಹಿಂದಿ ಕಲಿಸಲಾಗುತ್ತಿದೆ. ನಾವು ಹಿಂದಿಯನ್ನು ಶಾಲೆಗಳಲ್ಲಿ ಕಲಿತಿರುವುದು ನಮ್ಮ ಉಪಯೋಗಕ್ಕಲ್ಲ, ವಲಸೆ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಹಿಂದಿ ಭಾಷಿಕರ ಉಪಯೋಗಕ್ಕೆ! ಹಿಂದಿಯೊಂದೇ ದೇಶವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಇದರ ಅರ್ಥವೇನು? ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳು ದೇಶವನ್ನು ಒಡೆಯುತ್ತವೆಯೇ? ಹಿಂದಿಯನ್ನು ದೇಶಪ್ರೇಮದ ಪ್ರತೀಕವೆಂಬಂತೆ ಕೇಂದ್ರ ಸರ್ಕಾರ ಬಿಂಬಿಸುತ್ತಿದೆ. ಹಾಗಿದ್ದರೆ ಈ ನೆಲದ ಭಾಷೆಗಳು ದೇಶವಿರೋಧಿಗಳೇ? ದೇಶವೆಂದರೆ ಹಲವು ಭಾಷಿಕ ರಾಜ್ಯಗಳಿಂದ ಆದದ್ದಲ್ಲವೇ? ಹೀಗಿದ್ದ ಮೇಲೆ ಹಿಂದಿಯೊಂದನ್ನೇ ದೇಶದ ಭಾಷೆಯನ್ನಾಗಿ ಬಿಂಬಿಸುವುದೇ ಸಂವಿಧಾನ ವಿರೋಧಿ, ದೇಶವಿರೋಧಿಯಾಗುತ್ತದೆ. ಬ್ಯಾಂಕುಗಳ ವಿಲೀನದ ಹೆಸರಲ್ಲಿ ಕನ್ನಡನಾಡಿನಲ್ಲಿ ಹುಟ್ಟಿದ ಅನೇಕ ಬ್ಯಾಂಕುಗಳು ಈಗ ಇತಿಹಾಸದ ಪುಟ ಸೇರಿಕೊಂಡಿವೆ. ಇನ್ನೂ ಹಲವು ಬ್ಯಾಂಕುಗಳು ವಿಲೀನಗೊಂಡು ಅಸ್ತಿತ್ವ ಕಳೆದುಕೊಳ್ಳಲಿವೆ. ಏಕೀಕರಣಗೊಂಡ ಬ್ಯಾಂಕುಗಳ ಸಿಬ್ಬಂದಿ ಉತ್ತರದ ಭಾಗದಿಂದ ಬಂದವರಾಗಿದ್ದು ಎಲ್ಲೆಡೆ ಗ್ರಾಹಕರೊಂದಿಗೆ ಬಲವಂತವಾಗಿ ಹಿಂದಿಯಲ್ಲೇ ಮಾತನಾಡುತ್ತಿದ್ದಾರೆ. ಇದರಿಂದಾಗಿ ಹಿಂದಿ ಗೊತ್ತಿಲ್ಲದ ಬಡ ರೈತರು, ಗ್ರಾಮೀಣ ಭಾಗದ ಜನರು, ಮಹಿಳೆಯರು ಪ್ರತಿನಿತ್ಯ ಪರದಾಡುತ್ತಿದ್ದಾರೆ.


ರಾಷ್ಟ್ರಕವಿ ಕುವೆಂಪು ಅವರು ತ್ರಿಭಾಷಾ ಸೂತ್ರವನ್ನು ಹೊನ್ನಶೂಲವೆಂದು ಕರೆದರು. ಅದಕ್ಕೆ ಕಾರಣವೂ ಇದೆ. ಪ್ರಾದೇಶಿಕ ಭಾಷೆಗಳನ್ನು ಬೆಳೆಸುವ ದೃಷ್ಟಿಯಿಂದಲೇ ತ್ರಿಭಾಷಾ ಸೂತ್ರ ಜಾರಿಗೊಳಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಅದು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವ ಕುತಂತ್ರ ಎಂಬುದು ತಮಿಳುನಾಡು ಹೊರತುಪಡಿಸಿ ಹಿಂದಿಯೇತರ ರಾಜ್ಯಗಳಿಗೆ ಅರ್ಥವಾಗಲೇ ಇಲ್ಲ. ದಾರ್ಶನಿಕ ಕುವೆಂಪು ಅವರು ಹೇಳಿದ ಮಾರ್ಮಿಕ ಮಾತುಗಳು ಆ ಕಾಲದ ನಮ್ಮ ರಾಜ್ಯದ ರಾಜಕಾರಣಿಗಳ ಎದೆಗೆ ತಾಕಲೇ ಇಲ್ಲ. ದೇಶ ಸ್ವತಂತ್ರಗೊಂಡು, ಸಂವಿಧಾನ ರಚಿಸುವ ಸಂದರ್ಭದಲ್ಲಿ ಇಡೀ ದೇಶಕ್ಕೆ ಒಪ್ಪಿತವಾಗುವ ಒಂದು ಭಾಷೆಯನ್ನು ಸಂಪರ್ಕ ಭಾಷೆಯನ್ನಾಗಿ ಮಾಡಬೇಕು ಎಂಬ ಆಲೋಚನೆ ಹುಟ್ಟಿತು. ಹಿಂದಿ ಭಾಷೆ ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಾತ್ರ ಬಳಕೆಯಲ್ಲಿ ಇದ್ದುದರಿಂದಾಗಿ ಹಿಂದಿಯನ್ನೇ ಆ ಸಂಪರ್ಕ ಭಾಷೆಯನ್ನಾಗಿ ಮಾಡುವುದೆಂದು ಸಂವಿಧಾನ ನಿರ್ಮಾತೃಗಳು ತೀರ್ಮಾನಿಸಿದರು. ಆದರೆ ಹಿಂದಿ ರಾಜ್ಯಗಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಹಿಂದಿ ಅಪರಿಚಿತ ಭಾಷೆಯಾದ್ದರಿಂದ ಹಾಗೆ ಮಾಡಲು ಸಾಧ್ಯವಾಗದೇ, ಹಿಂದಿಯ ಜತೆ ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಸಂವಿಧಾನದಲ್ಲೇ ಘೋಷಿಸಲಾಯಿತು. ಹದಿನೈದು ವರ್ಷಗಳ ನಂತರ ಇಂಗ್ಲಿಷ್ ಭಾಷೆಯನ್ನು ತೆಗೆದು ಹಿಂದಿಯೊಂದನ್ನೇ ದೇಶದ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಮಾಡುವ ಪ್ರಸ್ತಾಪವೂ ಸಂವಿಧಾನದಲ್ಲಿತ್ತು. ಹಿಂದಿಯ ಜತೆ ಯಾವ ಸಂಬಂಧವೂ ಇಲ್ಲದ ದ್ರಾವಿಡ ರಾಜ್ಯಗಳು ಮತ್ತು ಇತರ ಹಿಂದಿಯೇತರ ರಾಜ್ಯಗಳು ಕೇಂದ್ರ ಸರ್ಕಾರದ ಏಕೈಕ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಹಿಂದಿಯನ್ನು ಪ್ರತಿಷ್ಠಾಪಿಸಲು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿರಲಿಲ್ಲ. ಇದು ಒಕ್ಕೂಟದ ಮೂಲಮಂತ್ರಕ್ಕೇ ವಿರುದ್ಧವಾಗಿತ್ತು. ಭಾರತದ ಅಖಂಡತೆಗೆ ಈ ಥರದ ಏಕಭಾಷಾ ಹೇರಿಕೆ ದೊಡ್ಡ ಅಪಾಯವಾಗಿ ಕಾಣಿಸತೊಡಗಿತು. ಹಿಂದಿಯೇತರ ರಾಜ್ಯಗಳು ಹಿಂದಿಯನ್ನು ಅಧಿಕೃತವಾಗಿ ಹೇರುವ ಈ ಹುನ್ನಾರಗಳ ವಿರುದ್ಧ ಪ್ರತಿಭಟಿಸಿದವು. ಹೀಗಾಗಿ 1963 ರಲ್ಲಿ ದ್ರಾವಿಡ ರಾಜ್ಯಗಳ ಒತ್ತಡಕ್ಕೆ ಮಣಿದ ಸಂಸತ್ತು ಇಂಗ್ಲಿಷನ್ನೂ ಹಿಂದಿಯ ಜತೆ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಉಳಿಸಿಕೊಳ್ಳುವ ನಿರ್ಣಯವನ್ನು (The Official Languages Act, 1963 ) ಅಂಗೀಕರಿಸಿತು. ಆದರೆ 1964 ರಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಎಲ್ಲ ರಾಜ್ಯಗಳ ಮೇಲೂ ಹಿಂದಿಯನ್ನು ಹೇರುವ ಕುತಂತ್ರ ನಡೆಯಿತು. ಇದರ ವಿರುದ್ಧ ಆಗ ಹಿಂದಿಯೇತರ ರಾಜ್ಯಗಳು ತೀವ್ರ ಸ್ವರೂಪದಲ್ಲಿ ಪ್ರತಿಭಟಿಸಿದವು. ವಿಶೇಷವಾಗಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಆಂಧ್ರಪದೇಶ ಮತ್ತು ಪಾಂಡಿಚೇರಿಗಳಲ್ಲಿ ವ್ಯಾಪಕ ಚಳವಳಿಗಳು ನಡೆದವು. ತಮಿಳುನಾಡಿನಲ್ಲಿ ಚಳವಳಿಯ ಹಿಂಸಾರೂಪಕ್ಕೂ ತಿರುಗಿತು. ಆಗ ಅನಿವಾರ್ಯವಾಗಿ ಕೇಂದ್ರ ಸರ್ಕಾರ 1963 ರ ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತಂದು, ಎಲ್ಲ ರಾಜ್ಯಗಳೂ ಹಿಂದಿಯನ್ನು ಸಂಪರ್ಕಭಾಷೆಯನ್ನಾಗಿ ಒಪ್ಪಿ, ತಮ್ಮ ತಮ್ಮ ಶಾಸನಸಭೆಗಳಲ್ಲಿ ನಿರ್ಣಯ ಅಂಗೀಕರಿಸುವವರೆಗೂ ಇಂಗ್ಲಿಷ ಕೂಡ ಅಧಿಕೃತ ಸಂವಹನದ ಭಾಷೆಯಾಗಿ ಉಳಿಯುತ್ತದೆ ಎಂದು ಕಾನೂನು ಮಾಡಿತು.


ನಂತರ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ಹರಸಾಹಸ ನಡೆಸಿತು. ಅತ್ಯಂತ ಸಹಜವಾಗಿ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಎರಡನ್ನು ಆಯ್ದುಕೊಳ್ಳುವ ದ್ವಿಭಾಷಾ ಸೂತ್ರವನ್ನು ಚಲಾವಣೆಗೆ ತರುವ ಆಯ್ಕೆ ಸರ್ಕಾರದ ಮುಂದಿತ್ತು. ಆದರೆ ಹೇಗಾದರೂ ಮಾಡಿ ಹಿಂದಿ ಭಾಷೆಯನ್ನು ಹೇರಲೇಬೇಕೆಂಬ ಉದ್ದೇಶದಿಂದ ತ್ರಿಭಾಷಾ ಸೂತ್ರ ಜಾರಿಗೆ ಬಂದಿತು. ಆದರೆ ತಮಿಳುನಾಡು ಈ ಅನ್ಯಾಯದ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿತು. ತಮಿಳರ ಬೇಡಿಕೆಗೆ ಮಣಿದ ಕೇಂದ್ರ ಸರ್ಕಾರ ತಮಿಳುನಾಡು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಹೇರಿತು. ತ್ರಿಭಾಷಾ ಸೂತ್ರವನ್ನು ಹೇರುವ ಸಂದರ್ಭದಲ್ಲೂ ಅದನ್ನು ಬಿಂಬಿಸಲಾಗಿದ್ದು ಪ್ರಾದೇಶಿಕ ಭಾಷೆಗಳನ್ನು ಉಳಿಸಲು ಈ ಸೂತ್ರವನ್ನು ಅನುಷ್ಠಾನಗೊಳಿಸಲಾಗುತ್ತಿದೆಯೆಂದು! ಕೇಂದ್ರ ಸರ್ಕಾರದ ಇಲಾಖೆ-ಉದ್ಯಮಗಳಲ್ಲಿ ಉದ್ಯೋಗ ನೇಮಕಾತಿಯೂ ಸೇರಿದಂತೆ ಆಯಾಯ ರಾಜ್ಯಗಳಲ್ಲಿ ಆಯಾಯ ಪ್ರದೇಶದ ಭಾಷೆಗಳನ್ನು ಬಳಸುವ ನಿಟ್ಟಿನಲ್ಲಿ ಈ ಸೂತ್ರ ತರಲಾಗುತ್ತಿದೆಯೆಂದೇ ಹೇಳಲಾಯಿತು. ಒಂದರ್ಥದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಒಂದು ಸ್ಥಾನಮಾನ ನೀಡಲಾಗುವುದು ಎಂದು ಭಾವಿಸಲಾಗಿತ್ತು. ಆದರೆ ಹಿಂದಿಯನ್ನು ಹೇರುವ ಉದ್ದೇಶವನ್ನು ಮರೆಮಾಚಿ ಸಂಚಿನ ಮೂಲಕ ಈ ತ್ರಿಭಾಷಾ ಸೂತ್ರವೆಂಬ ನೇಣಿನ ಕುಣಿಕೆಗೆ ಹಿಂದಿಯೇತರ ರಾಜ್ಯಗಳನ್ನು ಒಡ್ಡಲಾಗಿತ್ತು.


ಈ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡ ಕಾರಣಕ್ಕೆ ಈ ನಾಡಿನಲ್ಲಿ ಏನೇನೆಲ್ಲ ಆಗಿಹೋದವು? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಮಗೆ ಪರಕೀಯವಾದ ಹಿಂದಿ ಭಾಷೆ ಬಂದು ಕುಳಿತಿತು. ಯಾಕೆ, ಯಾವ ಪುರುಷಾರ್ಥಕ್ಕೆ ಈ ಭಾಷೆಯನ್ನು ಕಲಿಯಬೇಕು ಎಂದು ಗೊತ್ತಿಲ್ಲದೆ ಇಡೀ ರಾಜ್ಯದ ತಲೆ ತಲೆಮಾರುಗಳು ಹಿಂದಿ ಭಾಷೆಯನ್ನು ಕಲಿಯುತ್ತ ಬಂದವು. ಇಡೀ ದೇಶವನ್ನು ಹಿಂದಿಮಯವಾಗಿಸುವ ಕುತಂತ್ರ ಫಲಿಸತೊಡಗಿತು. ಕೇಂದ್ರ ಸರ್ಕಾರ ಕೋಟಿಗಟ್ಟಲೆ ಹಣ ಸುರಿದು ಹಿಂದಿ ಸಪ್ತಾಹ, ಹಿಂದಿ ಮಾಸ, ಹಿಂದಿ ದಿವಸ ಇತ್ಯಾದಿಗಳನ್ನು ಮಾಡಿ ಕೇಂದ್ರ ಸರ್ಕಾರದ ಇಲಾಖೆ-ಉದ್ಯಮಗಳಲ್ಲಿ ಹಿಂದಿ ಕಲಿಕೆಯನ್ನು ಕಡ್ಡಾಯ ಮಾಡಿತು. ತ್ರಿಭಾಷಾ ಸೂತ್ರ ರಚನೆಯ ಸಂದರ್ಭದಲ್ಲಿ ರಾಷ್ಟ್ರೀಯ ಏಕತೆಯ ದೃಷ್ಟಿಯನ್ನು ಇಟ್ಟುಕೊಂಡೇ ಈ ಸೂತ್ರ ರೂಪಿಸಲಾಗಿದೆ ಎಂದು ಹೇಳಿಕೊಳ್ಳಲಾಗಿತ್ತು. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಶಿಕ್ಷಣದಲ್ಲಿ ಅಳವಡಿಸುವ ಹಾಗೆ, ಹಿಂದಿ ರಾಜ್ಯಗಳಲ್ಲಿ ಹಿಂದಿಯೇತರ ದಕ್ಷಿಣ ಭಾರತದ ಒಂದು ಭಾಷೆಯನ್ನು ಕಲಿಸಬೇಕು ಎಂದು ಹೇಳಲಾಗಿತ್ತು. ಯಾವುದಾದರೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ದಕ್ಷಿಣ ಭಾರತದ ಭಾಷೆಗಳನ್ನು ಕಲಿಸುವ ವ್ಯವಸ್ಥೆಯಿದೆಯೇ ಎಂದು ಈಗ ದುರ್ಬೀನು ಇಟ್ಟು ಹುಡುಕಿದರೂ ನಿಮಗೆ ಕಾಣಸಿಗುವುದಿಲ್ಲ. ಹಾಗಿದ್ದ ಮೇಲೆ ಈ ಸೂತ್ರವನ್ನು ಕನ್ನಡಿಗರ, ದಕ್ಷಿಣ ಭಾರತೀಯರ ಮೇಲೆ ಮಾತ್ರ ಯಾಕೆ ಹೇರಲಾಯಿತು? ಏನಿದರ ಹುನ್ನಾರ?
ಈ ತ್ರಿಭಾಷಾ ಸೂತ್ರದ ಪ್ರಕಾರವಾದರೂ ಮೂರು ಭಾಷೆಗಳನ್ನು ಬಳಸುವ ವ್ಯವಸ್ಥೆ ಕೇಂದ್ರ ಸರ್ಕಾರದ ಇಲಾಖೆಗಳು, ಉದ್ಯಮಗಳು, ಅನುದಾನಿತ ಸಂಸ್ಥೆಗಳು, ಬ್ಯಾಂಕ್ ಗಳಲ್ಲಿ ಇದೆಯೇ? ಅದೂ ಕೂಡ ಇಲ್ಲ. ಬೇರೆ ಬ್ಯಾಂಕುಗಳಿರಲಿ, ಕರ್ನಾಟಕದಲ್ಲೇ ಜನ್ಮತಳೆದ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಈಗ ಕನ್ನಡ ಬಳಕೆ ನಿಂತುಹೋಗುತ್ತಿದೆ. ಇದಕ್ಕೆ ಯಾರು ಹೊಣೆ? ರಿಸರ್ವ್ ಬ್ಯಾಂಕ್ ನಿಯಮಾವಳಿ ಪ್ರಕಾರ ಈಗ ಚೆಕ್ ಬುಕ್ ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡನ್ನೇ ಬಳಸಲಾಗುವುದಂತೆ. ರಿಸರ್ವ್ ಬ್ಯಾಂಕ್ ಗೆ ತ್ರಿಭಾಷಾ ಸೂತ್ರ ಅನ್ವಯಿಸುವುದಿಲ್ಲವೇ? ಅದು ಈ ದೇಶದ ಸಂವಿಧಾನದ, ಕಾನೂನು-ನ್ಯಾಯಾಲಯಗಳಿಗೆ ಅತೀತವಾದ ಸಂಸ್ಥೆಯೇ? ಇಂಥ ಒಕ್ಕೂಟ ವಿರೋಧಿ ನಿಯಮವನ್ನು ರಿಸರ್ವ್ ಬ್ಯಾಂಕ್ ಹೇಗೆ ಅನುಷ್ಠಾನಕ್ಕೆ ತರುತ್ತದೆ? ಬ್ಯಾಂಕುಗಳಲ್ಲಿ ನೀಡಲಾಗುವ ಚಲನ್ ಗಳಲ್ಲಿ ಇತ್ತೀಚಿಗೆ ಕನ್ನಡ ಮಾಯವಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಚಲನ್ ಗಳನ್ನು ಮಾತ್ರ ನೀಡಲಾಗುತ್ತಿದೆ. ಬ್ಯಾಂಕ್ ಖಾತೆ ತೆರೆಯಲು ಕೊಡಲಾಗುವ ಅರ್ಜಿಯಲ್ಲೂ ಕನ್ನಡವಿರುವುದಿಲ್ಲ. ಹೋಗಲಿ, ಚೆಕ್ ಹಾಳೆಯ ಮೇಲೆ ಕನ್ನಡದಲ್ಲಿ ಬರೆದರೆ ಕೆಲವು ಬ್ಯಾಂಕ್ ಗಳಲ್ಲಿ ಅದನ್ನು ಸ್ವೀಕರಿಸಲು ನಿರಾಕರಿಸಲಾಗುತ್ತಿದೆ.

ನಾವು ಯಾವ ರಾಜ್ಯದಲ್ಲಿದ್ದೇವೆ? ಯಾರಿಗೆ ನಮ್ಮ ಮೊರೆಯನ್ನು ಹೇಳುವುದು?
ಹಿಂದಿ ಹೇರಿಕೆ: ನಮ್ಮ ಹಕ್ಕೊತ್ತಾಯಗಳೇನು?
‘ವಿವಿಧತೆಯಲ್ಲಿ ಏಕತೆ ನಮ್ಮ ಪ್ರಜಾಪ್ರಭುತ್ವದ ವಿಶೇಷ ಗುಣ ಎಂದು ಸಂವಿಧಾನ ಸಾರುತ್ತದೆ. ನನ್ನಂಥವರು ನಂಬುವುದು ಈ ‘ವಿವಿಧತೆಯಲ್ಲಿ ಏಕತೆ ಎಂಬ ಮೂಲಮಂತ್ರವನ್ನು. ಈ ದೇಶ ಬಹುಭಾಷಿಕರ ನಾಡು, ಬಹು ಸಂಸ್ಕೃತಿಗಳ ನೆಲೆವೀಡು. ಈ ಸಾಂಸ್ಕೃತಿಕ ವೈವಿಧ್ಯತೆ ಜೀವಂತವಾಗಿದ್ದಷ್ಟು ಕಾಲ ಈ ದೇಶ ಒಂದಾಗಿರಲು ಸಾಧ್ಯ. ಒಂದು ವೇಳೆ ಈ ‘ಬಹುತ್ವವನ್ನು ಹೊಸಕಿ ಹಾಕಿ ‘ಏಕತ್ವವನ್ನು ದೇಶದ ಮೇಲೆ ಹೇರಲು ಹೊರಟರೆ ಅದರ ಪರಿಣಾಮ ಭೀಕರವಾಗುತ್ತದೆ. ಈ ದೇಶ ಒಂದಾಗಿ ಉಳಿಯುವುದೇ ಕಷ್ಟಸಾಧ್ಯವಾಗುತ್ತದೆ. ಕನ್ನಡಿಗರು ಕನ್ನಡಿಗರಾಗಿಯೇ, ಕನ್ನಡ ಸಂಸ್ಕೃತಿಯನ್ನು ಮುಂದುವರೆಸಿಕೊಂಡೇ ದೇಶದ ಭಾಗವಾಗಿರುವ ಅವಕಾಶ ನೀಡಬೇಕು. ಅದೇ ರೀತಿ ಗುಜರಾತಿಗಳು ಗುಜರಾತಿಗಳಾಗಿಯೇ ಗುಜರಾತಿ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತ ದೇಶದ ಭಾಗವಾಗಬೇಕು. ಆದರೆ ದೇಶವನ್ನು ಆಳಿಕೊಂಡು ಬಂದ, ದೇಶವನ್ನು ನಿಯಂತ್ರಿಸಿಕೊಂಡು ಬಂದ ಶಕ್ತಿಗಳು ‘ಬಹುತ್ವದ ಶತ್ರು ಗಳಂತೆಯೇ ವರ್ತಿಸುತ್ತಿವೆ. ಅದಕ್ಕೆ ಅತ್ಯಂತ ಪರಿಣಾಮಕಾರಿಯಾದ ಉದಾಹರಣೆಯೆಂದರೆ ಈಗಲೂ ಆಂತರಿಕ ದಂಗೆಯಿಂದ ಬಸವಳಿದಿರುವ ಈಶಾನ್ಯ ರಾಜ್ಯಗಳು. ಈಶಾನ್ಯ ರಾಜ್ಯಗಳ ಭಾಷೆ, ಸಂಸ್ಕೃತಿಯ ಮೇಲೆ ಸವಾರಿ ಮಾಡಿದ ಪರಿಣಾಮವನ್ನು ನಾವು ಈಗ ಕಣ್ಣಾರೆ ನೋಡುತ್ತಿದ್ದೇವೆ. ಏಕಧರ್ಮ, ಏಕ ಸಂಸ್ಕೃತಿ, ಏಕಭಾಷೆಯನ್ನು ಯಾವುದೇ ಸಮುದಾಯದ ಮೇಲೆ ಹೇರಲು ಯತ್ನಿಸುವುದು ಅತ್ಯಂತ ಅಮಾನವೀಯ ಮತ್ತು ಕ್ರೂರತನ. ಇದು ದೇಶ ಕಟ್ಟುವ ಕೆಲಸ ಅಲ್ಲವೇ ಅಲ್ಲ.

  1. ಕೇಂದ್ರ ಸರ್ಕಾರ ಈ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ಈ ದೇಶದ ಬಹುತ್ವವನ್ನು ಸಾರ್ವಭೌಮತೆಯನ್ನು ಕಾಪಾಡಬೇಕು. ಹಿಂದಿಗೆ ಅನೈತಿಕವಾಗಿ ವಿಶೇಷ ಮನ್ನಣೆ ನೀಡುವ ಸಂವಿಧಾನದ 343 ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳೂ ಒಕ್ಕೂಟದ ದಷ್ಟಿಯಲ್ಲಿ ಸಮಾನ ಎಂದು ಸಾರಬೇಕು.
  2. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಎಲ್ಲ ಬಗೆಯ ಪತ್ರ ವ್ಯವಹಾರಗಳೂ ಕನ್ನಡದಲ್ಲೇ ನಡೆಯಬೇಕು. ಅಂತಾರಾಜ್ಯ ವ್ಯವಹಾರಗಳು ಮತ್ತು ಕೇಂದ್ರ ಸರ್ಕಾರದೊಂದಿಗಿನ ವ್ಯವಹಾರಗಳೂ ಸಹ ಕನ್ನಡ ನುಡಿಯಲ್ಲೇ ಆಗಬೇಕು.
  3. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿದೆ. ನಮ್ಮ ಶಾಲಾ ಪಠ್ಯಕ್ರಮಗಳಿಂದ ಹಿಂದಿ ಕಡ್ಡಾಯ ಕಲಿಕೆ ಕೊನೆಗೊಳ್ಳಬೇಕು. ಕನ್ನಡ ಮತ್ತು ಇಂಗ್ಲಿ ಷ್ ನಂತರ ಕನ್ನಡದ ಜನರು ಯಾವುದೇ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಬೇಕು. ತಮಿಳು, ತೆಲುಗು, ಫ್ರೆಂಚ್, ಜರ್ಮನ್, ಮಲೆಯಾಳ, ಅಸ್ಸಾಮಿ ಹೀಗೆ ಯಾವುದೇ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕನ್ನಡಿಗರಿಗೆ ಒದಗಿಸಬೇಕು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!