ಬೆಂಗಳೂರು : ತರಾತುರಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ವಿಧಾನ ಪರಿಷತ್ ನಲ್ಲಿ ಇಂದು ಒಂದು ದಿನದ ವಿಶೇಷ ಅಧಿವೇಶನ ಆಯೋಜಿಸಿದ್ದುದು ಭಾರೀ ಕೋಲಾಹಲಕ್ಕೆ ಕಾರಣವಾಯಿತು. ವಿಧಾನಪರಿಷತ್ ನಲ್ಲಿ ಭಾರೀ ಹೈಡ್ರಾಮಾ ನಡೆದಿದ್ದು, ಉಪ ಸಸಭಾಪತಿಯವರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದ ಘಟನೆ ನಡೆದಿದೆ.
ಪರಿಷತ್ ಕಲಾಪವನ್ನು ಶುಕ್ರವಾರ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ದಿಢೀರ್ ಮುಂದೂಡಿದ್ದರು. ಆದರೆ, ಬಿಜೆಪಿ ನಾಯಕರ ಕೋರಿಕೆ ಮೇರೆಗೆ ಒಂದು ದಿನದ ವಿಶೇಷ ಅಧಿವೇಶನ ಆಯೋಜಿಸಲಾಗಿತ್ತು.
ಪರಿಷತ್ತಿನಲ್ಲಿ ಗೊಂದಲ, ಗದ್ದಲ ಏರ್ಪಟ್ಟಿದ್ದುದರಿಂದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಶುರುವಾಗದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಹೊರನಡೆದರು. ಸಭೆ ಆರ್ಡರ್ ನಲ್ಲಿ ಇಲ್ಲದ ಸಂದರ್ಭದಲ್ಲಿ ಕಲಾಪಕ್ಕೆ ಆಗಮಿಸಿ, ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ಸಭಾಪತಿಯವರ ಕ್ರಮದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.
ಪ್ರತಾಪ್ ಚಂದ್ರಶೆಟ್ಟಿ ವಿಧಾನಪರಿಷತ್ ಪೀಠಕ್ಕೆ ಆಗಮಿಸುವುದಕ್ಕೂ ಮೊದಲೇ ಉಪಸಭಾಪತಿ ಜೆಡಿಎಸ್ ನ ಧರ್ಮೇಗೌಡರನ್ನು ಆಡಳಿತ ಪಕ್ಷದವರು ಕೂರಿಸಿ ಕಲಾಪ ಆರಂಭಿಸಲು ಮುಂದಾಗಿದ್ದರು. ಅಲ್ಲದೆ, ಸಭಾಪತಿಯವರು ಪರಿಷತ್ ನ ಒಳಕ್ಕೆ ಬಾರದಂತೆ ಆಡಳಿತ ಪಕ್ಷದವರು ಬಾಗಿಲು ಹಾಕಿದ ಘಟನೆಯೂ ನಡೆಯಿತು.
ಇನ್ನೊಂದೆಡೆ ಬಾಗಿಲು ಮುರಿದು ಸಭಾಪತಿಯವರನ್ನು ಒಳಕ್ಕೆ ಕರೆಯಿಸಲು ಕಾಂಗ್ರೆಸ್ ಸದಸ್ಯರು ಯತ್ನಿಸಿದ್ದೂ ನಡೆಯಿತು. ಈ ನಡುವೆ ಸಭಾಪತಿ ಸ್ಥಾನದಲ್ಲಿ ಕುಳಿತ ಉಪಾಧ್ಯಕ್ಷ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಹಿಡಿದೆಳೆದು ಪೀಠದಿಂದ ಕೆಳಕ್ಕಿಳಿಸಿದ್ದು, ಸಭಾಪತಿ ಸ್ಥಾನದಲ್ಲಿ ಅಳವಡಿಸಲಾಗಿದ್ದ ಗಾಜಿನ ತಡೆಯನ್ನೂ ಕಿತ್ತೆಸೆದರು ಎಂದು ವರದಿಗಳಾಗಿವೆ. ತಡೆಯಲು ಬಂದ ಮಾರ್ಷಲ್ ಗಳ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪದ ಧಿಕ್ಕಾರ ಕೂಗಿದರು.