ಒಳಚರಂಡಿ ವಿಭಾಗದ ಕಾರ್ಮಿಕರಿಗೆ ಸರಿಯಾದ ವೇತನ ನೀಡದೆ ಗುತ್ತಿಗೆದಾರರಿಂದ ಗೂಂಡಾಗಿರಿ : ಜಗದೀಶ್ ಪಾಂಡೇಶ್ವರ

Prasthutha|

ಮಂಗಳೂರು : ಮಹಾನಗರ ಪಾಲಿಕೆ ಒಳಚರಂಡಿ ವಿಭಾಗದ ಕಾಮಗಾರಿ ಹೊರಗುತ್ತಿಗೆ ರದ್ದುಪಡಿಸ ಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರತಿಭಟನೆ ನಡೆಸಿದೆ. ಮಹಾನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು ಮತ್ತು ದಸಂಸ (ಅಂಬೇಡ್ಕರ್ ವಾದ) ಕಾರ್ಯಕರ್ತರು ತಮ್ಮ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವಂತೆ ಒತ್ತಾಯಿಸಿದರು.  

- Advertisement -

ಈ ವೇಳೆ ಮಾತನಾಡಿದ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ್, ಗುತ್ತಿಗೆದಾರರು ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿ ಮಾಡದೆ  ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ. ತಿಂಗಳ 30 ದಿನ ಕೆಲಸ ಮಾಡಿದರೂ ಅವರಿಗೆ 26 ದಿನಗಳ ವೇತನ ಮಾತ್ರ ನೀಡಲಾಗುತ್ತಿದೆ. ಇದರಲ್ಲಿ ಕೂಡ ಅವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರಿಗೆ ಆರೋಗ್ಯ ಸಮಸ್ಯೆಗಳಿದ್ದರೂ, ಅವರ ಆರೋಗ್ಯ ತಪಾಸಣೆ ನಡೆಸುವ ಶಿಬಿರಗಳನ್ನು ನಡೆಸಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಅವರು ಹೇಳಿದರು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಒಳಚರಂಡಿ ವಿಭಾಗದ ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಅವರು ಒತ್ತಾಯಿಸಿದರು.  

- Advertisement -

 ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಅವರು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಬೇಡಿಕೆ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಸಂಘಟನೆಯ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.  

ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗೇಶ್ ಮುಲ್ಲಕಾಡು, ಮಂಗಳೂರು ತಾಲೂಕು ಸಂಚಾಲಕರಾದ ಕೆ. ಚಂದ್ರ ಕಡಂದಲೆ, ಕಾರ್ಮಿಕ ವಿಭಾಗದ ಪದ್ಮನಾಭ ವಾಮಂಜೂರ್, ರಾಜೇಶ್ ಪೆರ್ನಾಜೆ, ನವೀನ್, ಸಂತೋಷ್, ಜಯಂತ್, ಸತೀಶ್, ಅನ್ವಿತ್, ಶರಣ್ ಶೆಟ್ಟಿ, ರವೀಂದ್ರ ಕಟೀಲ್, ಅಜಿತ್, ಮುಂತಾದವರು ಉಪಸ್ಥಿತರಿದ್ದರು.

Join Whatsapp