ಅಂಬೇಡ್ಕರ್ ಪುತ್ಥಳಿ ಸ್ಥಳಾಂತರಿಸಲು ಏ.1ರ ಗಡುವು ವಿಧಿಸಿರುವ ಹೈಕೋರ್ಟ್; ತಪ್ಪಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ

Prasthutha|

ಬೆಂಗಳೂರು: ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸ್ಥಾಪಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಏಪ್ರಿಲ್ 1ರೊಳಗೆ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಹರಪನಹಳ್ಳಿಯ ‘ಡಾ.ಬಿ.ಆರ್. ಅಂಬೇಡ್ಕರ್ ಯುವ ಸಂಘಟನೆ’ ಅಧ್ಯಕ್ಷ ರೇವಣ ಸಿದ್ದಪ್ಪಗೆ ಕರ್ನಾಟಕ ಹೈಕೋರ್ಟ್ ತಾಕೀತು ಮಾಡಿದೆ.

- Advertisement -

ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದನ್ನು ಆಕ್ಷೇಪಿಸಿ ಒ ನೀಲಪ್ಪ ಸೇರಿ ಐವರು ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠವು ಪ್ರತಿಮೆ ಸ್ಥಳಾಂತರಿಸಲು ಕೊನೆಯದಾಗಿ ಏಪ್ರಿಲ್ 1ರವರೆಗೆ ಕಾಲಾವಕಾಶ ನೀಡಿತು.

ನ್ಯಾಯಾಲಯದ ಆದೇಶದಂತೆ ಪ್ರತಿಮೆಯನ್ನು ಸ್ಥಳಾಂತರಿಸಬೇಕು ಎಂದು ರೇವಣ್ಣ ಸಿದ್ದಪ್ಪಗೆ ತಾಕೀತು ಮಾಡಿದ ಪೀಠವು ತಪ್ಪಿದರೆ ನಿಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ ಏಪ್ರಿಲ್ 4ಕ್ಕೆ ವಿಚಾರಣೆ ಮುಂದೂಡಿತು.

- Advertisement -

ಇದಕ್ಕೂ ಮುನ್ನ ಅನೇಕ ಬಾರಿ ಸೂಚಿಸಿದ್ದರೂ ಏಕೆ ವಿಚಾರಣೆಗೆ ಹಾಜರಾಗಲಿಲ್ಲ? 2021ರ ಆಗಸ್ಟ್ 13ರಂದು ಪ್ರಮಾಣಪತ್ರ ಸಲ್ಲಿಸಿ ಪ್ರತಿಮೆಯನ್ನು ನಾಲ್ಕು ತಿಂಗಳೊಳಗೆ ಪರ್ಯಾಯ ಜಾಗಕ್ಕೆ ಸ್ಥಳಾಂತರಿಸುವುದಾಗಿ ನೀವೇ ಮುಚ್ಚಳಿಕೆ ನೀಡಿದ್ದರೂ ಈವರೆಗೂ ಏಕೆ ಸ್ಥಳಾಂತರಿಸಿಲ್ಲ? ಎಂದು ವಿಚಾರಣೆಗೆ ಖುದ್ದು ಹಾಜರಿದ್ದ ರೇವಣ್ಣ ಸಿದ್ದಪ್ಪ ಮತ್ತವರ ವಕೀಲ ಹನುಮಂತಪ್ಪ ಬಿ ಹರವಿ ಗೌಡರ್ ಅವರನ್ನು ಪೀಠವು ಪ್ರಶ್ನಿಸಿತು.

ಸಂವಹನ ಕೊರತೆಯಿಂದ ವಿಚಾರಣೆಗೆ ಹಾಜರಾಗಲಿಲ್ಲ ಮತ್ತು ಸರ್ಕಾರದ ಪರ್ಯಾಯ ಜಾಗ ಒದಗಿಸದ್ದಕ್ಕೆ ಪ್ರತಿಮೆ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ ಎಂದು ಅರ್ಜಿದಾರ ಪರ ವಕೀಲರು ಉತ್ತರಿಸಿದರು.

ಸರ್ಕಾರಿ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಅವರು ಅನಧಿಕೃತವಾಗಿ ಸ್ಥಾಪಿಸಿರುವ ಪ್ರತಿಮೆಯನ್ನು ಸ್ಥಳಾಂತರಿಸಲು ಜಾಗ ಒದಗಿಸುವುದಿಲ್ಲ ಎಂಬುದಾಗಿ ಈಗಾಗಲೇ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ ಎಂದರು.

ರೇವಣ್ಣ ಸಿದ್ದಪ್ಪ ಮತ್ತವರ ಪರ ವಕೀಲರನ್ನು ಉದ್ದೇಶಿಸಿ, ನೀವು ಯಾವುದೇ ವಿವರಣೆ ನೀಡಬೇಡಿ. ಮುಚ್ಚಳಿಕೆ ನೀಡಿದ್ದರೂ ಪ್ರತಿಮೆ ಸ್ಥಳಾಂತರಿಸದ್ದಕ್ಕೆ ನಿಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಬಾರದು? ನ್ಯಾಯಾಲಯದ ಆದೇಶವನ್ನು ಲಘುವಾಗಿ ಪರಗಿಣಿಸಿದ್ದೀರಿ. ನ್ಯಾಯಾಲಯದ ಆದೇಶವನ್ನು ನೀವು ಅರ್ಥ ಮಾಡಿಕೊಂಡಿಲ್ಲ ಎನ್ನುವುದಾದರೆ ನಾವು ಅರ್ಥ ಮಾಡಿಸುತ್ತೇವೆ. ಹೇಗೆ ಆದೇಶ ಪಾಲನೆ ಮಾಡಿಸಬೇಕೆಂಬುದು ನಮಗೆ ಗೊತ್ತಿದೆ ಎಂದು ಪೀಠವು ತರಾಟೆಗೆ ತೆಗೆದುಕೊಂಡಿತು.

ಅಂತಿಮವಾಗಿ ಒಂದು ವಾರ ಕಾಲವಕಾಶ ನೀಡಲಾಗುವುದು. ಒಂದೊಮ್ಮೆ ಪ್ರತಿಮೆ ಸ್ಥಳಾಂತರಿಸದೆ ಹೋದರೆ ನಿಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿ ಈ ಮೇಲಿನಂತೆ ಆದೇಶಿಸಿತು.

(ಕೃಪೆ: ಬಾರ್ & ಬೆಂಚ್)



Join Whatsapp