ಕೊಟ್ಟಾಯಂ: ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ ಇಂದು (ಶನಿವಾರ) ಭಾರೀ ಮಳೆಯಾಗಿದೆ. ಕೋಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಗಡಿಯಲ್ಲಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಒಬ್ಬರು ಸಾವನ್ನಪ್ಪಿದ್ದು, 12 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ಸೇನೆ ಮತ್ತು ವಾಯುಪಡೆಯ ನೆರವು ಪಡೆಯಲು ರಾಜ್ಯ ಸರ್ಕಾರ ಮನವಿ ಮಾಡಿದೆ. ಭೂಕುಸಿತದಿಂದ ತತ್ತರಿಸಿರುವ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಗಡಿಯಲ್ಲಿರುವ ಗುಡ್ಡಗಾಡು ಪ್ರದೇಶಗಳಲ್ಲಿ ರಕ್ಷಣೆಗಾಗಿ ವಾಯುಪಡೆಯ ಸಹಾಯವನ್ನು ಕೋರಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಕೂಟಿಕಲ್ ಮತ್ತು ಪೆರುವಂತನಮ್ ಪ್ರದೇಶಗಳ ಸುತ್ತಲೂ ಭೂಕುಸಿತಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿರುವ ಎರಡು ಗುಡ್ಡಗಾಡು ಪ್ರದೇಶಗಳಲ್ಲಿ ಕನಿಷ್ಠ 10 ಜನರು ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ನದಿಗಳು ಅಪಾಯ ಮಟ್ಟವನ್ನು ಮೀರಿದ್ದು, 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.