ಆಂಧ್ರಪ್ರದೇಶ: ಇಲ್ಲಿನ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ವರನ ಮನೆಗೆ ವಧು ದೋಣಿಯ ಮೂಲಕ ಹೋಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ವೀಡಿಯೋದಲ್ಲಿ, ಬಣ್ಣದ ಸೀರೆಯೊಂದಿಗೆ ಶೃಂಗರಿಸಿದ ವಧು ಮತ್ತು ಆಕೆಯ ಕುಟುಂಬಸ್ಥರು ವರನ ಮನೆಗೆ ಹೋಗುವ ವೇಳೆಯಲ್ಲಿ ಭಾರೀ ಮಳೆಯನ್ನು ಎದುರಿಸಿದರು. ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಸ್ಥಿತಿ ತಲೆದೋರಿದೆ. ಪರಿಣಾಮವಾಗಿ ವರನ ಮನೆಗೆ ವಾಹನದಲ್ಲಿ ಹೋಗುವ ಬದಲು ದೋಣಿ ಮೂಲಕ ಹೋಗುವಂತಾಯಿತು.
ಮಳೆಗಾಲವನ್ನು ತಪ್ಪಿಸುವ ಆಶಯದೊಂದಿಗೆ ಆಗಸ್ಟ್ ನಲ್ಲಿ ಹಸೆಮಣೆ ಏರುವ ಯೋಜನೆಯಲ್ಲಿದ್ದ ವರ ಅಶೋಕ್ ಮತ್ತು ವಧು ಪ್ರಶಾಂತಿ ಅವರು ಜುಲೈನಲ್ಲಿ ಮದುವೆಯಾಗಲು ನಿರ್ಧರಿಸಿದರು. ಆದರೆ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಮದುವೆ ಆರಂಭದಲ್ಲಿ ವಿಳಂಬವಾಯಿತು. ಅದರ ಹೊರತಾಗಿಯೂ ವಧು ಮತ್ತು ಅವರ ಕುಟುಂಬವು ಮದುವೆಯ ವಿಧಿವಿಧಾನಗಳನ್ನು ಮುಗಿಸಲು ವರನ ಮನೆಗೆ ದೋಣಿಯಲ್ಲಿ ತೆರಳಿದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.