ಲಾಕ್‌ಡೌನ್ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಆರೋಗ್ಯ ಸಚಿವ ಕೆ. ಸುಧಾಕರ್

Prasthutha|

ಬೆಂಗಳೂರು : ರಾಜ್ಯವು ಲಾಕ್‌ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಿನಾಯಿತಿ ಕೊಡಲಾಗಿದ್ದು, ಅಳೆದು ತೂಗಿ ಈ ನಿರ್ಧಾರ ಮಾಡಿದ್ದೇವೆ. ಒಂದು ವೇಳೆ ವಿನಾಯಿತಿಯಿಂದ ಸೋಂಕು ಹೆಚ್ಚಳವಾದರೆ ಮತ್ತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೇ.10ಕ್ಕಿಂತ ಹೆಚ್ಚು ಸೋಂಕು ಇರುವ ಜಿಲ್ಲೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. 5% ಒಳಗೆ ಸೋಂಕು ಇರುವ ಜಿಲ್ಲೆಗಳು ಎಚ್ಚರ ತಪ್ಪಬಾರದು. ಹೆಚ್ಚು ಹೆಚ್ಚು ಟೆಸ್ಟ್ ಗಳನ್ನು ಮಾಡಲು ಕ್ರಮವಹಿಸಬೇಕು ಎಂದರು.

- Advertisement -

ಅಂತಾರಾಜ್ಯ, ಹೊರ ದೇಶದಿಂದ ಬರುವವರಿಗೆ ಚೆಕ್ ಪಾಯಿಂಟ್ ಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ಒಂದು ಗ್ರಾಮದಲ್ಲಿ ಐದು ಸೋಂಕಿತರು ಕಂಡು ಬಂದರೇ ಅ ಗ್ರಾಮವನ್ನೇ ಸೀಲ್ ಡೌನ್ ಮಾಡಬೇಕು. ಗ್ರಾಮ ಭಾಗದಲ್ಲಿ ಸೋಂಕು ಬಂದ ವ್ಯಕ್ತಿಯನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕು ಎಂದರು.

ನಗರ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡಬಾರದು. ಬೆಂಗಳೂರು ನೋಡಿದರೆ ನನಗೂ ಭಯವಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆಪಾಯ ಖಚಿತ. ಜನ ಎಚ್ಚರಿಕೆಯಿಂದ ಇರಬೇಕು. 3-4 ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗುತ್ತದೆ. ಅಲ್ಲಿಯವರೆಗೂ ಸರ್ಕಾರದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸುಧಾಕರ್ ಹೇಳಿದರು.

ಅನ್ ಲಾಕ್ ಮಾಡಿದರೂ ಜನರು ಎಚ್ಚರಿಕೆಯಿಂದ ಇರಬೇಕು. ಎರಡು ಡೋಸ್ ಲಸಿಕೆ ಪಡೆಯುವವರೆಗೆ ಜನ ಎಚ್ಚರವಾಗಿ ಇರಬೇಕು. ರಾಜ್ಯದಲ್ಲಿ ಕನಿಷ್ಠ 70% ಡೋಸ್ ಸಂಪೂರ್ಣವಾದ ಮೇಲೆ ನಾವು ಮೊದಲಿನಂತೆ ಆರಾಮವಾಗಬಹುದು. ಲಸಿಕೆ‌ ಹಾಕಿಸಿಕೊಳ್ಳೋವರೆಗೂ ಯಾರು ಮೈ ಮರೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಸಾವಿನ ಸಂಖ್ಯೆ ಮುಚ್ಚಿಟ್ಟಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಸುಧಾಕರ್, ರಾಜ್ಯದಲ್ಲಿ ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ. ಇದನ್ನು ಪದೇ ಪದೇ ಹೇಳುತ್ತಿದ್ದೇನೆ. ನಮ್ಮ ರಾಜ್ಯವನ್ನು ಬಿಹಾರಕ್ಕೆ ಹೋಲಿಸಬೇಡಿ. ಕರ್ನಾಟಕಕ್ಕೂ ಬಿಹಾರಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ. ಯಾವುದೇ ಮಾಹಿತಿ ನಾವು ಮುಚ್ಚಿಟ್ಟಿಲ್ಲ. ಅಂತಹ ಅವಕಾಶವೇ ಇಲ್ಲ ಎಂದರು

- Advertisement -