ನೀಟ್ ಮಕ್ಕಳ ರಕ್ತ ಹೀರಿ ಕಂಡವರ ಜೇಬು ತುಂಬಿಸುವ ದಂಧೆ: ಹೆಚ್ ಡಿಕೆ ಕಟು ಟೀಕೆ

Prasthutha|

ಬೆಂಗಳೂರು: ನೀಟ್ ವ್ಯವಸ್ಥೆ ಟ್ಯೂಷನ್ ಅಂಗಡಿಗಳ ಬೆಳೆಸಿ ಪೋಷಿಸುತ್ತಿದೆ. ಆ ಮೂಲಕ ಮಕ್ಕಳ ರಕ್ತ ಹೀರಿ ಕಂಡವರ ಜೇಬು ತುಂಬಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

- Advertisement -

ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಸರಣಿ ಟ್ವೀಟ್ ಮಾಡಿದ್ದು, ನೀಟ್ ನಿಂದ ವೈದ್ಯ ಶಿಕ್ಷಣದಲ್ಲಿ ರಾಜ್ಯದ ಬಡ, ಮಾಧ್ಯಮ ವರ್ಗ ಹಾಗೂ ಗ್ರಾಮೀಣ ಭಾಗದ ವಿಧ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮತ್ತೆ ದನಿ ಎತ್ತಿದ್ದಾರೆ.

ಲಕ್ಷ ಲಕ್ಷ ಕಿತ್ತು ಪೋಷಕರ ರಕ್ತ ಹೀರುವ ಟ್ಯೂಷನ್ ಅಂಗಡಿಗಳು ಸರ್ಕಾರಗಳ ಕಣ್ಣಿಗೆ ಕಾಣುತ್ತಿಲ್ಲ ಎಂದು ಟೀಕಿಸಿರುವ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ನಾವು ನೀಟ್ ವಿರೋಧಿಸುತ್ತೇವೆ. ಮಕ್ಕಳ ಜೀವಕ್ಕೆ ಕುಣಿಕೆ ಬಿಗಿದು ಕಂಡವರ ಜೇಬು ಭರ್ತಿ ಮಾಡುವ ಈ ದಂಧೆ ಬೇಕಿಲ್ಲ. ಅದಕ್ಕೆ ಚರಮಗೀತೆ ಹಾಡುತ್ತವೆ ಎಂದು ಹೇಳಿದ್ದಾರೆ.

- Advertisement -

ಪ್ರಶ್ನೆ ಮಾಡಿದರೆ ದ್ರೋಹವೇ? ಧನದಾಹವೇ? ಕರ್ನಾಟಕದ ಉನ್ನತ ಶಿಕ್ಷಣ ಸಚಿವರು ಕಟ್ಟಿರುವ ಈ ಹಣಿಪಟ್ಟಿ ಬಗ್ಗೆ ಏನೂ ಹೇಳಬೇಕೋ ಕಾಣೆ. ನೀಟ್ ವಿರೋಧಿಸುವವರು ಧನಧಾಹಿಗಳು, ದ್ರೋಹಿಗಳು ಎಂದು ಅವರು ಯಾರನ್ನು ಉದ್ದೇಶಿಸಿ ಹೇಳಿದ್ದು ಎನ್ನುವುದನ್ನು ಅವರೇ ತಿಳಿಸಬೇಕು ಎಂದು ಟೀಕಿಸಿದ್ದಾರೆ.

ನಾನು ಮೆಡಿಕಲ್ ಕಾಲೇಜು ನಡೆಸುತ್ತಿಲ್ಲ. ಎಂಜಿನಿಯರಿಂಗ್ ಕಾಲೇಜನ್ನೂ ನಡೆಸುತ್ತಿಲ್ಲ. ಕೊನೆಪಕ್ಷ ಒಂದು ಸಣ್ಣ ಕೈಗಾರಿಕೆಯೂ ಇಲ್ಲ. ಬಿಡದಿಯ ತೋಟ ಬಿಟ್ಟರೆ ನನ್ನದೂ ಎನ್ನುವಂಥದ್ದು ಏನೂ ಇಲ್ಲ. ಆದರೂ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ದ್ರೋಹಿಗಳು, ಧನಧಾಹಿಗಳು ಎಂದು ನಾಲಿಗೆ ಜಾರಿ, ತಮ್ಮ ಉನ್ನತ ಗುಣವನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಕೇಂದ್ರದ ಒಬ್ಬ ಸಚಿವರು, ನೀಟ್ ಪರೀಕ್ಷೆ ಪಾಸ್ ಮಾಡಲಾಗದ ವಿಧ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಾರೆ ಎಂದು ಆ ಮಕ್ಕಳ ಸ್ವಾಭಿಮಾನವನ್ನು ಅಪಮಾನಿಸಿದ್ದರೆ, ಉನ್ನತ ಶಿಕ್ಷಣ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದ್ರೋಹದ ಹಣೆಪಟ್ಟಿ ಕಟ್ಟಿ ದೊಡ್ಡತನ ಮೆರೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿಲ್ಲವೇ? ಲಕ್ಷ ಲಕ್ಷ ಕಿತ್ತು ಪೋಷಕರ ರಕ್ತ ಹೀರುವ ಟ್ಯೂಷನ್ ಅಂಗಡಿಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ? ನೀಟ್ ಸುಳಿಗೆ ಸಿಕ್ಕಿ ಜೀವ ಕಳೆದುಕೊಂಡ ಮಕ್ಕಳ ಅತ್ಮರೋಧನೆ ಕೇಳುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Join Whatsapp