ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾದ ಕುಮಾರಸ್ವಾಮಿ

Prasthutha|

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ರಾಜಕೀಯವಾಗಿ ಕುತೂಹಲ ಮೂಡಿಸಿದೆ. ಆದರೆ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜಕೀಯ ಚರ್ಚೆ ನಡೆಸಿಲ್ಲ. ಮಂಡ್ಯ ಮೈಷುಗರ್ ಖಾಸಗೀಕರಣ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿದ್ದೇನೆ. ಮನ್ಮುಲ್ ಅಕ್ರಮ ಪ್ರಕರಣ, ಜಿ.ಪಂ, ತಾ.ಪಂ ಮೀಸಲಾತಿ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇನೆ ಎಂದರು.

- Advertisement -

ಮೈಷುಗರ್ ಖಾಸಗಿ ಪಾಲಾಗಲು ಅವಕಾಶ ಕೊಡದಂತೆ ಮನವಿ ಮಾಡಿದ್ದೇವೆ, ಖಾಸಗಿಯವರಿಗೆ ನೀಡಲು ಒಪ್ಪಿಗೆ ಕೊಡುವುದಿಲ್ಲ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ. ಮೈಶುಗರ್ ಕಾರ್ಖಾನೆ ಖಾಸಗಿಯವರಿಗೆ ವಹಿಸುವ ಬದಲು ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು ಎಂದು ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ತಾ.ಪಂ. ಜಿ.ಪಂ. ಮೀಸಲಾತಿ ಬಗ್ಗೆ ಯೋಗೇಶ್ವರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಸಿದ ಕುಮಾರಸ್ವಾಮಿ, ಯೋಗೇಶ್ವರ್ ಬಾಲಿಶ ಹೇಳಿಕೆ ಕೊಡುವುದು ಎಷ್ಟು ಸರಿ ಎಂಬುದನ್ನು ಅವರೇ ಯೋಚನೆ ಮಾಡಲಿ, ಮೀಸಲಾತಿ ನಿಗದಿ ಮಾಡುವುದು ಚುನಾವಣಾ ಆಯೋಗ, ಸರ್ಕಾರ ಅಲ್ಲ ಎಂದು ಹೇಳಿದರು.

- Advertisement -

ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ಡಿಕೆ, ಮೇಕೆದಾಟು ಯೋಜನೆಯಲ್ಲಿ ತಮಿಳುನಾಡಿಗೆ ಅನ್ಯಾಯ ಮಾಡುವ ಯೋಚನೆ ನಮಗೆ ಇಲ್ಲ, ಹಾಗಾದರೆ ತಮಿಳುನಾಡು ಸರ್ಕಾರ ಹೊಗೇನಕಲ್ ನಲ್ಲಿ ಯಾರ ಅಪ್ಪಣೆ ತೆಗೆದುಕೊಂಡು ಜಲಾಶಯ ಕಟ್ಟಿದೆ? ಮಂಡ್ಯ ಮೈಶುಗರ್ ಖಾಸಗೀಕರಣಕ್ಕೆ ಸಂಸದರ ಒತ್ತಡ ಇದೆಯಾ ಎಂದು ಅವರನ್ನೇ ಕೇಳಬೇಕು, ಅಂಥ ಸಂಸದೆ ಮಂಡ್ಯಕ್ಕೆ ಸಿಕ್ಕಿಲ್ಲ, ಸಿಗಲ್ಲ ಎಂದು ವ್ಯಂಗ್ಯವಾಡಿದರು.

ಮೊನ್ನೆ ಯಾವುದೋ ಸಭೆಯಲ್ಲಿ ಕೆಆರ್ ಎಸ್ ಅನ್ನು ಸುಮಲತಾ ಅವರೇ ರಕ್ಷಣೆ ಮಾಡುತ್ತಿರುವ ಹಾಗೆ ಹೇಳಿಕೆ ಕೊಟ್ಟಿದ್ದಾರೆ, ಮೈಷುಗರ್ ಕಾರ್ಖಾನೆಯನ್ನು 40 ವರ್ಷ ಗುತ್ತಿಗೆ ಕೊಡಬೇಕು ಎಂದು ಸರ್ಕಾರದ ಮುಂದೆ ಪ್ರಸ್ತಾವನೆ ಇತ್ತು. ಆದರೆ ಅದನ್ನು ಅಂಗೀಕರಿಸಬಾರದು ಎಂದು ಮನವಿ ಮಾಡಿದರು.

ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪತ್ರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸ್ಟಾಲಿನರ ಪತ್ರಿಕಾ ಹೇಳಿಕೆ ಗಮನಿಸಿದ್ದೇನೆ, ಸ್ಟಾಲಿನ್ ಅನುಮಾನ ಮೇಕೆದಾಟುವಿನಲ್ಲಿ ಸಂಗ್ರಹ ಮಾಡುವ ನೀರಿನ ಪ್ರಮಾಣ ಕಡಿಮೆ ಆಗುತ್ತದೆ ಎನ್ನುವುದಾಗಿದೆ. ಮೇಕೆದಾಟುವಿನಲ್ಲಿ ಜಲಾಶಯ ಕಟ್ಡಿದರೆ ನೀರಿನ ಪ್ರಮಾಣ ಕಡಿಮೆಯಾಗುವುದಿಲ್ಲ. ತಮಿಳುನಾಡಿಗೆ ಕೊಡುವ ನೀರು ಪ್ರತೀ ವರ್ಷ ಕೊಡುವ ಹೊಣೆ ನಮ್ಮದು. ನಾವು ತಮಿಳುನಾಡಿನವರು ಅಣ್ಣತಮ್ಮಂದಿರಂತೆ ಇರಬೇಕು, ಎರಡೂ ರಾಜ್ಯಗಳ ರೈತರು ಅಣ್ಣತಮ್ಮಂದಿರು, ಜಲಾಶಯ ನಿರ್ಮಾಣ ನಮ್ಮ ಜನರ ಬೇಡಿಕೆಯಾಗಿದೆ. ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥ ಆಗುವ ನೀರನ್ನು ಸಂಗ್ರಹ ಮಾಡಲು ಜಲಾಶಯ ಕಟ್ಟಿದ್ದೇವೆ ಅಷ್ಟೆ. ನಮ್ಮದು ನ್ಯಾಯಯುತ ಬೇಡಿಕೆ. ತಮಿಳುನಾಡಿಗೆ ಅನ್ಯಾಯ ಮಾಡುವ ಉದ್ದೇಶ ಇಲ್ಲ. ನ್ಯಾಯಾಧೀಕರಣದ ಆದೇಶದಂತೆ 193 ಟಿಎಂಸಿಅಡಿ ನೀರು ಕೊಡುತ್ತೇವೆ, ಅದನ್ನು ನಿಲ್ಲಿಸಲು ಆಗುವುದಿಲ್ಲ. ಹೊಗೇನಕಲ್ ನಲ್ಲಿ ತಮಿಳುನಾಡು ಜಲಾಶಯ ಕಟ್ಟಿದೆಯಲ್ಲ ಯಾರಪ್ಪಣೆ ಪಡೆದಿತ್ತು?. ಎಂದು ಪ್ರಶ್ನಿಸಿದರು.

Join Whatsapp