ಬೆಂಗಳೂರು: ಹಾವೇರಿಯಲ್ಲಿ ಜನವರಿ ಮೊದಲವಾರ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದಿಲ್ಲದ ವಿವಾದಕ್ಕೆ ಸಿಲುಕಿದೆ. ಎಂದಿನ ಸಂಭ್ರಮವಾಗಲೀ, ಸಂತೋಷವಾಗಲೀ ಸಾಹಿತ್ಯ, ಸಂಸ್ಕೃತಿಯ ವಾತಾವರಣದಲ್ಲಿ ಕಂಡುಬರುತ್ತಿಲ್ಲ. ಬರೀ ಆಕ್ಷೇಪಣೆ, ದೂರು ದುಮ್ಮಾನಗಳೇ ಕೇಳಿ ಬರುತ್ತಿವೆ. ಸಾಹಿತ್ಯ ಪರಿಷತ್ತು ತನ್ನ ಘನತೆಯನ್ನು, ಜವಾಬ್ದಾರಿಯನ್ನು ಮರೆತುಬಿಟ್ಟಿದೆಯೇ? ಯಾಕೆ ಇಷ್ಟು ವಿವಾದ ನಡೆಯುತ್ತಿದೆ? ಏನಾಗಿದೆ ರಾಜ್ಯಾಧ್ಯಕ್ಷರಿಗೆ? ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪಾ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಡೀ ಆಹ್ವಾನ ಪತ್ರಿಕೆಯನ್ನು ಓದಿದರೆ ಕನ್ನಡ ಸಾಹಿತ್ಯದಲ್ಲಿ ಸಾಧನೆ ಮಾಡಿದ ಬೆರಳೆಣಿಕೆಯ ಮಹಿಳೆಯರು ಮಾತ್ರ ಅಲ್ಲಿ ಕಾಣುತ್ತಿದ್ದಾರೆ. ಮಹಿಳಾ ಸಾಹಿತ್ಯದಲ್ಲಿ ಎಷ್ಟೊಂದು ಪ್ರತಿಭಾವಂತ ಲೇಖಕಿಯರು ಹೊಸಬರು, ಹಳಬರನ್ನು ಒಳಗೊಂಡಂತೆ ಬರೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡ ಸಂಖ್ಯೆಯಲ್ಲಿ ಬರೆಯುತ್ತಿರುವ ಲೇಖಕಿಯರನ್ನು ಒಳಗೊಳ್ಳಬೇಕೆಂಬ ವಿವೇಚನೆಯನ್ನು ಮರೆಯಿತೆ? ಎಂದು ಕೇಳಿದ್ದಾರೆ.
ಪರಿಷತ್ತು ಜನಪ್ರತಿನಿಧಿಗಳ, ಲೇಖಕ/ ಲೇಖಕಿಯರ ಪ್ರಾತಿನಿಧಿಕ ಸಂಸ್ಥೆ. ಅಧ್ಯಕ್ಷರು ಈ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆ. ಮುಕ್ಕೋಟಿ ಕನ್ನಡಿಗರ ಆಶಯವನ್ನು, ಕನಸುಗಳನ್ನು, ನಿರೀಕ್ಷೆಗಳನ್ನು ಎದೆಯಲ್ಲಿಟ್ಟುಕೊಂಡೇ ಅವರು ಕೆಲಸ ಮಾಡಬೇಕಾಗುತ್ತದೆ. ಆದರೆ, ಸಮ್ಮೇಳನದಲ್ಲಿ ಲೇಖಕಿಯರನ್ನು/ ಮಹಿಳೆಯರನ್ನು ಮೆರವಣಿಗೆಯಲ್ಲಿ ಕೇವಲ ಕುಂಭಗಳನ್ನು ಹೊರುವ ಕೆಲಸಕ್ಕಾಗಿ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಕೇವಲ ಅಲಂಕಾರ ನಿರ್ವಹಣೆಗೆ ಮಾತ್ರ ಅವರು ಮೀಸಲಾಗಿದ್ದಾರೆಯೇ? ಸಾಧಕರಿಗೆ ಸನ್ಮಾನವೆಂದರೆ ಮಹಿಳೆಯರೆಂದರೆ ಕೇವಲ ದಾನಿಗಳು, ಸಂಗೀತ ತಜ್ಞರು, ವಿಶೇಷ ಚೇತನರು ಮಾತ್ರ ಆಗಿದ್ದಾರೆಯೇ? ಉಳಿದವರು ಏಕಿಲ್ಲ? ಎಂದು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯವನ್ನು ಪರಿಷತ್ತು, ಅಕಾಡೆಮಿಗಳು, ಸರ್ಕಾರದ ಅನುದಾನ ಪಡೆಯುವ ಎಲ್ಲಾ ಸಂಸ್ಥೆಗಳು ಪಾಲಿಸಲೇಬೇಕಾಗುತ್ತದೆ. ಯಾವುದೋ ರಾಜಕೀಯ ಪಕ್ಷದ ಹಿತಾಸಕ್ತಿ ಪೂರೈಸಲು ಪರಿಷತ್ತಿನ ಅಧ್ಯಕ್ಷರೆ ಆಗಬೇಕೆ? ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಾಮಾಜಿಕ ನ್ಯಾಯವನ್ನು ಪಾಲಿಸಲು ಇಷ್ಟೊಂದು ಮಿತಿಗಳಿವೆಯೇ? ಅಂತಃಕರಣ ಕಣ್ಣು ಮುಚ್ಚಿಕೊಂಡಿದೆಯೇ? ಅಥವಾ ಅವರಿಗೆ ವಿವೇಚನೆಯ ಕೊರತೆಯೇ? ಮಹಿಳಾ ಗೋಷ್ಠಿ ವಿಷಯದಲ್ಲಾದರೂ ಹೊಸತನವಿದೆಯೇ? ಅದೇ ಹಳೆಯ ವಿಷಯಗಳ ಪುನಃರಾವರ್ತನೆಯಾಗುತ್ತಿದೆ. ಪರಿಷತ್ತು ಇದುವರೆಗೂ ಸಮ್ಮೇಳನದ ಸಂದರ್ಭದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಸಲಹೆ ಸೂಚನೆಗಳನ್ನು ತನ್ನ ಗಮನಕ್ಕೆ ತಂದುಕೊಂಡೆ ಮಹಿಳೆಗೆ ಸಂಬಂಧಿಸಿದ ಗೋಷ್ಟಿಗಳನ್ನು ವಿನ್ಯಾಸ ಮಾಡುತ್ತಾ ಬಂದಿದೆ. ಆದರೆ ಈಗ ಆಗಿರುದೇನು? ಎಂದು ಪುಷ್ಪಾ ಕೇಳಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘ ಘನತೆವೆತ್ತ ಲೇಖಕಿಯರ ಪ್ರಾತಿನಿಧಿಕ ಸಂಸ್ಥೆ. 43 ವರ್ಷಗಳ ಇತಿಹಾಸವಿರುವ ಈ ಸಂಸ್ಥೆ ಸತತವಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ತನ್ನ ಕೈಜೋಡಿಸಿದೆ. “ಕಲೇಸಂ ಅಧ್ಯಕ್ಷರ ಭೇಟಿಗೆ ನಾನು ಅಪಾಯಿಂಟ್ಮೆಂಟ್ ಕೊಟ್ಟಲ್ಲವಲ್ಲ” ಎಂಬ ದಾಷ್ಠಿಕ ಉತ್ತರವನ್ನು ಈಗಾಗಲೇ ಕೊಟ್ಟಿರುವ ಸನ್ಮಾನ್ಯ ಅಧ್ಯಕ್ಷ ಮಹೇಶ ಜೋಶಿ, ಲೇಖಕಿಯರ ಸಂಘವನ್ನು ಪಕ್ಕಕಿಟ್ಟು ಸಾಧಿಸುವುದಾದರೂ ಏನನ್ನು? ಈ ಮಾತು ಸಮಸ್ತ ಲೇಖಕಿಯರನ್ನು ಅವಮಾನಿಸಿದಂತೆ ಅಲ್ಲವೇ? ಗಂಡಾಳ್ವಿಕೆಯ ಗೂಂಡಾಗಿರಿಯನ್ನು ಇದು ತೋರಿಸುತ್ತಿಲ್ಲವೇ? ಇದು ಖಂಡನೀಯ ಎಂದು ತಿಳಿಸಿದ್ದಾರೆ.
ವ್ಯಕ್ತಿಗತವಾಗಿ ಎಲ್ಲರಿಗೂ ಅವರದೇ ವೈಚಾರಿಕ ಭಿನ್ನತೆಯಿರುತ್ತದೆ, ಇರಲೇಬೇಕು. ಆದರೆ ಒಂದು ಸಂಸ್ಥೆಯ ನಾಯಕತ್ವ ವಹಿಸಿದ ಮೇಲೆ ವ್ಯಕ್ತಿಗತ ಅಭಿಪ್ರಾಯವನ್ನು ಪಕ್ಕಕ್ಕೆ ಇಟ್ಟು ಕೆಲಸ ಮಾಡಬೇಕಾಗುತ್ತದೆ. ಕನಿಷ್ಟ ಇಷ್ಟು ತಿಳುವಳಿಕೆಯಿಲ್ಲದೆ ಹೇಗೆ ಬೇಕಾದರೂ ಎಲ್ಲವನ್ನು ನಡೆಸಬಹುದು ಎಂಬ ನಡವಳಿಕೆ ಪರಿಷತ್ತಿನಂತಹ ಜನಪ್ರತಿನಿಧಿ ಸಂಸ್ಥೆಗೆ ತಕ್ಕನಾದುದಲ್ಲ. ಈ ನಡವಳಿಕೆ ಕರ್ನಾಟಕ ಲೇಖಕಿಯರ ಸಂಘ ಹಾಗೂ ಲೇಖಕಿಯರಿಗೆ ಮಾಡಿದ ಅವಮಾನವೆಂದೇ ನಾನು ಭಾವಿಸುತ್ತೇನೆ. ಲೇಖಕಿಯರನ್ನು ಕುರಿತ ಉಪೇಕ್ಷೆಯನ್ನು ಕಲೇಸಂನ ಪ್ರತಿನಿಧಿಯಾಗಿ ಈ ಮೂಲಕ ವಿರೋಧಿಸುತ್ತೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.