ಹಾಸನ: ಜಿಲ್ಲೆಯಲ್ಲಿ ಮಳೆ ಕಣ್ಣಾಮುಚ್ಚಾಲೆ

Prasthutha|

ಹಾಸನ: ಜಿಲ್ಲೆಯಲ್ಲಿ ಕೆಲವೆಡೆ ಮಳೆ ಬಿಡುವು ನೀಡಿದ್ದರೆ, ಮತ್ತೆ ಹಲವೆಡೆ ಅಬ್ಬರಿಸುತ್ತಿದೆ. ಹೆಚ್ಚು ಕಡೆ ಸತತ ಆರನೇ ದಿನವೂ ಮಳೆಯ ಆರ್ಭಟ ಮುಂದುವರಿದಿದೆ. ಭಾರೀ ಮಳೆಗೆ ಹಾಸನ ತಾಲೂಕಿನ ಮೊಸಳೆ ಗ್ರಾಮದ ಕೆರೆ ಏರಿ ಕುಸಿಯಲಾರಂಭಿಸಿದೆ.

- Advertisement -

ಸುಮಾರು 120 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿರುವ ಬೃಹತ್ ಕೆರೆ ಏರಿ ಕುಸಿಯುತ್ತಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.

ಕೆರೆ ಏರಿ ಒಡೆದರೆ ಸಾವಿರಾರು ಎಕರೆ ಪ್ರದೇಶದ ರೈತರ ಜಮೀನಿನ ಮೇಲೆ ನೀರು ನುಗ್ಗುಲಿದ್ದು, ಅಪಾರ ನಷ್ಟದ ಆತಂಕ ಎದುರಾಗಿದೆ. ಸ್ಥಳಕ್ಕೆ ನೀರಾವರಿ ಇಲಾಖೆ ಇಂಜಿನಿಯರ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾತ್ಕಾಲಿಕವಾಗಿ ಬಿರುಕು ಬಿಟ್ಟಿರುವ ಜಾಗಕ್ಕೆ ಜಲ್ಲಿ, ಮಣ್ಣು ತುಂಬಲಾಗುತ್ತಿದೆ. ಕೆರೆಯ ಎರಡು ಕಡೆಯಲ್ಲಿಯೂ ಕೋಡಿಯನ್ನು ಆಳವಾಗಿ ಒಡೆದು ನೀರು ಖಾಲಿ ಮಾಡಲಾಗುತ್ತಿದೆ. ಕೆರೆ ತುಂಬಿದ ಸಂತಸದಲ್ಲಿದ್ದ ಮೊಸಳೆ ಗ್ರಾಮಸ್ಥರು ಕೆರೆ ಖಾಲಿಯಾಗುತ್ತಿರುವುದನ್ನು ಕಂಡು ಮುಂದಿನ ಬೆಳೆಗೆ ನೀರು ಇರುವುದಿಲ್ಲ ಎಂದು ಚಿಂತಾಕ್ರಾAತರಾಗಿದ್ದಾರೆ. ಇನ್ನು ಕೆರೆಯ ಹಿಂಭಾಗದಲ್ಲಿ ಹೊರಗಿನಿಂದ ಬಂದವರು ಜಮೀನು ಖರೀದಿಸಿ ಅಲ್ಲಿಗೆ ಓಡಾಡಲು ರಸ್ತೆ ಮಾಡಿಕೊಂಡಿದ್ದು ಇದರಿಂದಾಗಿ ಕೆರೆಯ ಏರಿ ಕುಸಿಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮಳೆ ನಿಂತ ಕೂಡಲೇ ಕೆರೆ ಏರಿಯನ್ನು ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- Advertisement -

ಉಕ್ಕಿ ಹರಿಯುತ್ತಿದೆ ಹೇಮೆ:

ಸಕಲೇಶಪುರ ಹಾಗೂ ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿರುವುದರಿಂದ ಹೇಮಾವತಿ ನದಿಗೆ 21,405 ಕ್ಯುಸೆಕ್ ನೀರು ಹರಿದು ಬರುತ್ತಿದೆ. 24, 800 ಕ್ಯುಸೆಕ್ ನೀರನ್ನು 6 ಕ್ರಸ್ಟ್ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ. ಸಕಲೇಶಪುರ ಪಟ್ಟಣದ ಪ್ರವೇಶದ್ವಾರದ ಬಳಿಯಿರುವ ಹೊಳೆ ಮಲ್ಲೇಶ್ವರ ದೇವಾಲಯದ ಮೆಟ್ಟಿಲು ಮುಳುಗಡೆಯಾಗಿವೆ. ಮಳೆ ಮುಂದುವರಿದರೆ ದೇವಾಲಯದ ಒಳಗೇ ನೀರು ನುಗ್ಗಲಿದೆ. ಈಗಾಗಲೇ ದೇವಾಲಯದಲ್ಲಿರುವ ಹುಂಡಿ, ಇತರೆ ವಸ್ತುಗಳನ್ನು ಸ್ಥಳಾಂತರಿಸಲಾಗಿದೆ. ಕಳೆದ ರಾತ್ರಿ ಹೆತ್ತೂರು, ಹೆಗ್ಗದ್ದೆ ಭಾಗದಲ್ಲಿ 150 ಮಿಮೀ ಮಳೆಯಾಗಿದೆ. ಮಳೆ ಹಿನ್ನೆಲೆ ಸಕಲೇಶಪುರ ತಾಲೂಕಿನ ಅಂಗನವಾಡಿ ಹಾಗೂ 10ನೇ ತರಗತಿವರೆಗೆ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ.

ರಾಮನಾಥಪುರ ಹೋಬಳಿ ರುದ್ರಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಮ್ಮ ಎಂಬುವರ ಮನೆಗೋಡೆ ಭಾರಿ ಮಳೆಗೆ ಕುಸಿದಿದೆ. ಹಾಗೆಯೇ ಕಟ್ಟೇಪುರ ಗ್ರಾಮದ ವೆಂಕಟಮ್ಮ ಅವರ ಮನೆಯೂ ಕುಸಿದಿದೆ.

Join Whatsapp