ಚಂಡೀಗಡ: ಕಾಂಗ್ರೆಸ್ ತೊರೆದಿದ್ದ ಹರ್ಯಾಣದ ಮಾಜಿ ಸಚಿವ ಸಂಪತ್ ಸಿಂಗ್ ಸಹಿತ ಹಲವು ಮಾಜಿ ಕಾಂಗ್ರೆಸ್ ನಾಯಕರು, ಪಕ್ಷದ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಮತ್ತೆ ಸೇರ್ಪಡೆಗೊಂಡಿದ್ದಾರೆ.
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿಂಗ್ 2019 ರಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು. ಆದರೆ ನಾನು ಎಂದಿಗೂ ಔಪಚಾರಿಕವಾಗಿ ಕೇಸರಿ ಪಕ್ಷಕ್ಕೆ ಸೇರಲಿಲ್ಲ ಎಂದು ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.
ಸಿಂಗ್ ಜೊತೆಗೆ ಮಾಜಿ ಸಚಿವ ಪ್ರೊ. ಸಂಪತ್ ಸಿಂಗ್ ,ಮಾಜಿ ಶಾಸಕ ರಾಧೇಶ್ಯಾಮ್ ಶರ್ಮಾ, ಮಾಜಿ ಶಾಸಕ ಪ್ರೊ. ರಾಮಭಗತ್ ,ಮಾಜಿ ಶಾಸಕ ಹಿಮ್ಮತ್ ಸಿಂಗ್, ಅಖಿಲ ಭಾರತ ಬ್ಯಾಂಕಿನ ಯೂನಿಯನ್ ನಾಯಕ ಲಲಿತ್ ಅರೋರಾ ಕೂಡಾ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಹೂಡಾ, ಸಿಂಗ್, ಶರ್ಮಾ ಮತ್ತು ಭಗತ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಇನ್ನಷ್ಟು ಉತ್ತೇಜನ ಸಿಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹರ್ಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಮತ್ತು ರಾಜ್ಯಸಭಾ ಸಂಸದ ದೀಪೇಂದರ್ ಹೂಡಾ ಉಪಸ್ಥಿತರಿದ್ದರು.