ನ್ಯಾಯದಾನದ ತೊಡಕು ನಿವಾರಣೆಗೆ ಸರ್ಕಾರದ ಮೂರು ಅಂಗಗಳು ಸಾಮರಸ್ಯದಿಂದ ಕಾರ್ಯನಿರ್ವಹಿಸುವುದು ಅಗತ್ಯ: ಸಿಜೆಐ ರಮಣ

Prasthutha|

ನವದೆಹಲಿ: ನ್ಯಾಯದಾನಕ್ಕೆ ಎದುರಾಗುವ ಕಾರ್ಯವಿಧಾನಗಳ ತೊಡಕುಗಳನ್ನು ತೆಗೆದುಹಾಕಲು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಸಾಮರಸ್ಯದಿಂದ ಕಾರ್ಯನಿರ್ವಹಿಸುವುದು ಅಗತ್ಯ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಶನಿವಾರ ಅಭಿಪ್ರಾಯಪಟ್ಟರು.

ಒಡಿಶಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕಾರ್ಯಾಂಗ ಮತ್ತು ಶಾಸಕಾಂಗವು ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಆಗ ಮಾತ್ರ, ನ್ಯಾಯಾಂಗ ಕಾನೂನು ನಿರ್ಮಾಪಕನಾಗಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಬರುವುದಿಲ್ಲ. ಅಂತಿಮವಾಗಿ ಸರ್ಕಾರದ ಮೂರು ಅಂಗಗಳ ಕಾರ್ಯನಿರ್ವಹಣೆ ಮಾತ್ರವೇ ನ್ಯಾಯದಾನಕ್ಕೆ ಎದುರಾಗಿರುವ ಕಾರ್ಯವಿಧಾನದ ಅಡೆ ತಡೆಗಳನ್ನು ತೆಗೆದುಹಾಕಬಲ್ಲದು” ಎಂದು ಹೇಳಿದರು.

- Advertisement -

ಸಾಮಾನ್ಯ ಜನರು ಕಾನೂನುಗಳನ್ನು ರೂಪಿಸುವುದು ನ್ಯಾಯಾಲಯಗಳ ಜವಾಬ್ದಾರಿ ಎಂದು ನಂಬಿದ್ದು ಅಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಇದರಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳ ಪಾತ್ರವೂ ಮಹತ್ವದ್ದು ಎಂದು ಅವರು ಹೇಳಿದರು.

“ಶಾಸಕಾಂಗವು ಕಾನೂನುಗಳನ್ನು ಮರುಪರಿಶೀಲಿಸಬೇಕಿದ್ದು ಸಮಯ ಮತ್ತು ಜನರ ಅಗತ್ಯಗಳಿಗೆ ತಕ್ಕಂತೆ ಅವುಗಳಲ್ಲಿ ಸುಧಾರಣೆ ತರಬೇಕಿದೆ. ನಮ್ಮ ಕಾನೂನುಗಳು ನಮ್ಮ ಪ್ರಾಯೋಗಿಕ ವಾಸ್ತವಕ್ಕೆ ಹೊಂದಿಕೆಯಾಗಬೇಕು ಎಂಬುದನ್ನು ನಾನು ಒತ್ತಿ ಹೇಳುತ್ತೇನೆ. ಸಂಬಂಧಪಟ್ಟ ನಿಯಮಗಳನ್ನು ಕಾರ್ಯಾಂಗ ಸರಳಗೊಳಿಸುವ ಮೂಲಕ ಈ ಪ್ರಯತ್ನಗಳನ್ನು ಹೊಂದಿಸಬೇಕು” ಎಂದು ಅವರು ಹೇಳಿದರು.

ದುರ್ಬಲ ವರ್ಗಗಳಿಗೆ ಕಾನೂನು ನೆರವು ನೀಡುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಕಾನೂನು ಜಾಗೃತಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಅವರು ಘೋಷಿಸಿದರು.

(ಕೃಪೆ: ಬಾರ್ ಆಂಡ್ ಬೆಂಚ್)

- Advertisement -