ದೆಹಲಿ ಗಲಭೆ: ಬಂಧಿತ ವಿದ್ಯಾರ್ಥಿ ಹೋರಾಟಗಾರ್ತಿ ಗುಲ್ಫಿಶಾ ಫಾತಿಮಾಗೆ ಜೈಲಿನಲ್ಲಿ ಕಿರುಕುಳ

Prasthutha|

ನವದೆಹಲಿ: ಯುಎಪಿಎ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿ ಹೋರಾಟಗಾರ್ತಿ ಗುಲ್ಫಿಶಾ ಫಾತಿಮಾ, ತನಗೆ ಜೈಲಿನ ಅಧಿಕಾರಿಗಳು ಮತೀಯ ಬೈಗುಳಗಳ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೆಹಲಿ ನ್ಯಾಯಾಲಯದ ಮುಂದೆ ಆರೋಪಿಸಿದ್ದಾರೆ.

ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಂಬಿಎ ಪದವೀಧರೆ ಫಾತಿಮಾ ಪ್ರಸ್ತುತ ತಿಹಾರ್ ಜೈಲಿನಲ್ಲಿ ಬಂಧನದಲ್ಲಿದ್ದಾರೆ.

- Advertisement -

ಈ ಪ್ರಕರಣದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾದಾಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಬ್ ರಾವತ್‌ರವರ ಮುಂದೆ ಈ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾರೆ.

ಜೈಲಿನಲ್ಲಿರುವ ಸಿಬ್ಬಂದಿ  ತಾರತಮ್ಯದಿಂದ ವರ್ತಿಸುತ್ತಿದ್ದಾರೆ ಎಂದು ಫಾತಿಮಾ ಆರೋಪಿಸಿದ್ದಾರೆ.

“ನನಗೆ ಜೈಲಿನಲ್ಲಿ ಸಮಸ್ಯೆ ಇದೆ. ನನ್ನನ್ನು ಇಲ್ಲಿಗೆ ಕರೆತಂದಾಗಿನಿಂದ ಜೈಲಿನ ಸಿಬ್ಬಂದಿಯಿಂದ ನಿರಂತರವಾಗಿ ತಾರತಮ್ಯವನ್ನು ಎದುರಿಸುತ್ತಿದ್ದೇನೆ. ಅವರು ನನ್ನನ್ನು ‘ವಿದ್ಯಾವಂತ ಭಯೋತ್ಪಾದಕಿ'(educated terrorist ) ಎಂದು ಕರೆಯುತ್ತಿದ್ದಾರೆ. ಮತ್ತು ಮತೀಯ ಬೈಗುಳಗಳನ್ನು ನನ್ನ ಮೇಲೆ ಬಳಸಲಾಗುತ್ತಿದೆ. ನಾನು ಇಲ್ಲಿ ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದೇನೆ. ಒಂದು ವೇಳೆ ನನಗೇನಾದರೂ ಸಂಭವಿಸಿದರೆ ಇದಕ್ಕೆ ಜೈಲು ಅಧಿಕಾರಿಗಳೇ ಹೊಣೆ ” ಎಂದು ಅವರು ಆರೋಪಿಸಿದರು.

ಫಾತಿಮಾ ನೇರವಾಗಿ ನ್ಯಾಯಾಲಯಕ್ಕೆ ಈ ವಿಷಯವನ್ನು ಬಹಿರಂಗ ಪಡಿಸಿದ ಬಳಿಕ, ನ್ಯಾಯಾಧೀಶರು ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಫಾತಿಮಾರ ವಕೀಲರಿಗೆ ತಿಳಿಸಿದ್ದಾರೆ.

ಗಲಭೆಯಲ್ಲಿನ ಪಿತೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಾಖಲಾದ ಚಾರ್ಜ್‌ಶೀಟ್‌ನ ಬಗ್ಗೆ ನ್ಯಾಯಾಲಯ ಈ ಹಿಂದೆ ಮಾಹಿತಿ ಪಡೆದಿದ್ದು, ಎಲ್ಲಾ 15 ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.

ಅಕ್ಟೋಬರ್ 3 ರಂದು ಪ್ರಕರಣವನ್ನು ಹೆಚ್ಚಿನ ಪರಿಗಣನೆಗೆ ಇಡಲಾಗುವುದು ಎಂದು ನ್ಯಾಯಾಯವು ನಿರ್ದೇಶಿಸಿದೆ.

- Advertisement -